ರಸ್ತೆ ಕಾಮಗಾರಿ ತಡೆ ಹಿಡಿದು ವೈಜ್ಞಾನಿಕ ಹೊರ ಚರಂಡಿ ಮಾಡಿ, ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಲು ಸಾರ್ವಜನಿಕರ ಆಗ್ರಹಿಸಿ ಆಯುಕ್ತರಿಗೆ ಮನಿವಿ
ವಿಜಯಪುರ 23: ನಗರದ ವಾರ್ಡ್ ನಂ. 27ರ ಮುಬೀನ್ ಚೌಕ್ನಿಂದ ನವಬಾಗ್ ರಸ್ತೆಯವರೆಗೆ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಹೊರ ಚರಂಡಿ ವ್ಯವಸ್ಥೆ ಮಾಡದೆ ಹಾಗೂ ಸುಮಾರು 10 ರಿಂದ 12 ಅಡಿಗಳಷ್ಟು ಸರ್ಕಾರಿ ಜಾಗ ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸದೆ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ಸ್ಥಳೀಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡ ಇಜಾಜ್ ಅಹಮದ್ ಮುಕ್ಬಿಲ್ ಮಾತನಾಡಿ, ರಸ್ತೆಯುದ್ದಕ್ಕೂ ಕೆಲವರು ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇದರಿಂದ ರಸ್ತೆಯ ಅಗಲ ಕಡಿಮೆಯಾಗಿದೆ. ಪರಿಣಾಮವಾಗಿ ಪ್ರತಿದಿನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳು ಸೇರಿದಂತೆ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಈ ಕುರಿತು ವಾರ್ಡ್ನ ನಾಗರಿಕರು ಈಗಾಗಲೇ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿ, ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ರಸ್ತೆಯ ನಿರ್ಮಾಣದ ವೇಳೆ ಅಗತ್ಯವಿರುವ ಹೊರಚರಂಡಿ (ಓಪನ್ ಡ್ರೈನೇಜ್) ವ್ಯವಸ್ಥೆ ಕಲ್ಪಿಸದೆ.
ಸಿಸಿ ರಸ್ತೆ ಕಾಮಗಾರಿಯನ್ನು ಆರಂಭಿಸಿರುವುದು ಮತ್ತೊಂದು ಸಮಸ್ಯೆಯಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಮಳೆ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರಿಗೆ ತೊಂದರೆಯಾಗುವ ಆತಂಕವಿದೆ. ಕೂಡಲೇ ಹೊರ ಚರಂಡಿ ಮಾಡುವವರೆಗೂ ರಸ್ತೆ ಕಾಮಗಾರಿಯನ್ನು ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸರ್ಕಾರದ ಹಣ ಪೋಲಾಗುತ್ತದೆ. ಆದ್ದರಿಂದ, ಮೊದಲು ಸರ್ಕಾರಿ ಜಾಗದ ಸಮೀಕ್ಷೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕು.
ನಂತರ ರಸ್ತೆ ಅಗಲಕ್ಕೆ ಅನುಗುಣವಾಗಿ ಅಗತ್ಯ ಹೊರಚರಂಡಿ ವ್ಯವಸ್ಥೆ ಕಲ್ಪಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿರುವ ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸರ್ವೆ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹಾಗೂ ವಾರ್ಡ್ನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಹ್ಮದ ಗೌಸ್ ಖಾದ್ರಿ, ಸಾಧಿಕ ರೋಜಿಂದಾರ, ಅರಬಾದ ಶೇಖ, ಸಲೀಂ ಕೋಲಾರ, ಶಾಹಿದ ಮುಲ್ಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.