ಧಾರವಾಡ - ಹುಬ್ಬಳ್ಳಿ

ಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ

ಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ
The service, discipline, and sacrifice of the Police Department serve as a model for society: Chief

ಲೋಕದರ್ಶನ ವರದಿ 

           ಧಾರವಾಡ ನ.23: ಸಮಾಜದ ಸುರಕ್ಷತೆಗಾಗಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಯಾವುದೇ ಸಮಯದಲ್ಲಿಯೂ ಸ್ಪಂದಿಸುವ ಪೊಲೀಸ್ ಇಲಾಖೆಯ ಸೇವಾ ಮನೋಭಾವ ಸಮಾಜದಲ್ಲಿ ವಿಶ್ವಾಸ ಮತ್ತು ಭದ್ರತೆಯ ಭಾವನೆ ಮೂಡಿಸುತ್ತದೆ ಎಂದು ಐ.ಎಫ್‌.ಎಸ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರು ಹೇಳಿದರು. 

            ಅವರು ಇಂದು (ನ.23) ಧಾರವಾಡ ಜಿಲ್ಲಾ ಪೊಲೀಸ್ ಡಿಎಆರ್ ಕೇಂದ್ರ ಸ್ಥಾನದ ಕವಾಯತ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿದರು. 

ಪ್ರತಿದಿನ ಸಮಾಜದ ಸುರಕ್ಷತೆಗಾಗಿ ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂದು ಆರೋಗ್ಯ, ಸಂತೋಷ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಗಾಗಿ ಕ್ರೀಡಾಂಗಣದಲ್ಲಿ ಸೇರಿದ್ದಾರೆ.

            ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು. 

ಪೊಲೀಸ್ ಇಲಾಖೆಯ ಕರ್ತವ್ಯ ಅತ್ಯಂತ ಜವಾಬ್ದಾರಿಯುತವಾದದ್ದು.

           ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೊಲೀಸ್ ಠಾಣೆಗೆ ಬಂದಾಗ ಅವರನ್ನು ಗೌರವದಿಂದ ಮಾತನಾಡಿಸಿ, ಅವರ ಕಷ್ಟಗಳನ್ನು ಆಲಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡುತ್ತಾರೆ. ಮಧ್ಯರಾತ್ರಿ, ಹಬ್ಬದ ದಿನ ಅಥವಾ ಕುಟುಂಬದೊಂದಿಗೆ ಊಟ ಮಾಡುವ ಸಮಯದಲ್ಲಿಯೂ ತುರ್ತು ಕರೆ ಬಂದರೆ ತಕ್ಷಣ ಸ್ಪಂದಿಸಬೇಕಾಗುತ್ತದೆ.

            ಇಂತಹ ಕರ್ತವ್ಯ ನಿಷ್ಠೆ ಮತ್ತು ತ್ಯಾಗದ ಮನೋಭಾವ ಪೊಲೀಸ್ ಇಲಾಖೆಯ ವಿಶೇಷತೆಯಾಗಿದೆ. ಇದರಿಂದ ಪ್ರತಿಯೊಬ್ಬ ನಾಗರಿಕನಿಗೂ ಪೊಲೀಸ್ ವ್ಯವಸ್ಥೆ, ಸರ್ಕಾರ ಹಾಗೂ ಸಂವಿಧಾನದ ಮೇಲೆ ವಿಶ್ವಾಸ ಮತ್ತು ಗೌರವ ಮೂಡುತ್ತದೆ ಎಂದು ಅವರು ಹೇಳಿದರು. 

ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.                     ತಂತ್ರಜ್ಞಾನ ಬಳಕೆ, ಸೈಬರ್ ಅಪರಾಧಗಳ ಪತ್ತೆ, ವಿಧಿವಿಜ್ಞಾನ ಹಾಗೂ ಇತ್ತೀಚಿನ ಆರ್ಥಿಕ ಅಪರಾಧಗಳ ತನಿಖೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಅಪಾಯದಲ್ಲಿರುವವರಿಗೆ ಧೈರ್ಯ ತುಂಬುವುದು, ಸಮಾಜಘಾತುಕ ಶಕ್ತಿಗಳು ಪ್ರಚೋದನೆ ನೀಡಿದ ಸಂದರ್ಭದಲ್ಲಿಯೂ ಸಂಯಮದಿಂದ ವರ್ತಿಸುವುದು ಹಾಗೂ ಪ್ರತಿಯೊಬ್ಬರೊಂದಿಗೆ ಮಾನವೀಯತೆ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಯ ವಿಶೇಷತೆಯಾಗಿದೆ ಎಂದರು. 


ಸುದ್ದಿ ಓದಿ