ಧಾರವಾಡ - ಹುಬ್ಬಳ್ಳಿ

ರಂಗಭೂಮಿ ಮನುಷ್ಯನ ಬದುಕಿಗೆ ದಾರೀದೀಪ: ಡಾ. ರಾಮು ಮೂಲಗಿ

ರಂಗಭೂಮಿ ಮನುಷ್ಯನ ಬದುಕಿಗೆ ದಾರೀದೀಪ: ಡಾ. ರಾಮು ಮೂಲಗಿ


ಧಾರವಾಡ   22: ಮನುಷ್ಯನ ತಪ್ಪುಗಳನ್ನು ತಿದ್ದಿ, ತೀಡಿ, ತಿಳಿ ಹೇಳಿ ಇದ್ದುದ್ದನ್ನ ಇದ್ದ ಹಾಗೆ ಸತ್ಯವನ್ನು ಪ್ರದರ್ಶಿಸುವ ಮೂಲ ಧ್ಯೇಯ ರಂಗಭೂಮಿಯ ತತ್ವವಾಗಿದೆ. ಮನುಷ್ಯನು ಸುಧಾರಿಸಿಕೊಂಡು ತನ್ನ ಅರಿವನ್ನು ಹೆಚ್ಚಿಸಿಕೊಳ್ಳುವಲ್ಲಿ ಮತ್ತು ಸ್ವಸ್ಥ ಸಮಾಜ ನಿರ್ಮಿಸಿ ಉತ್ತಮ ಬದುಕು ಕಟ್ಟಿಕೊಳ್ಳಲು ರಂಗಭೂಮಿ ಕ್ಷೇತ್ರವು ದಾರೀದೀಪವಾಗಿದೆ ಎಂದು ಜಾನಪದ ತಜ್ಞ ಡಾ. ರಾಮು ಮೂಲಗಿ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು 71 ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-2026 ರ ಅಂಗವಾಗಿ ನವೆಂಬರ್ 18 ರಿಂದ 29 ರವರೆಗೆ 12 ದಿನಗಳ ಕಾಲ ಆಯೋಜಿಸಿರುವ ನಾಟಕೋತ್ಸವದ ಐದನೇ ದಿನ ‘ಮಂಡೋದರಿ ಕಲ್ಯಾಣ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.   

ಗೀಗೀ ಪದ ಹಾಡುಗಾರಿಕೆ ಮೂಲಕ ಸಭಿಕರನ್ನು ರಂಜಿಸಿದ ಮೂಲಗಿ ಅವರು ಮೂಲೆ ಮೂಲೆಯಲ್ಲಿದ್ದ ಅನಾಮದೇಯ ಕಲಾವಿದರನ್ನು ಸಂಘವು ಕರೆಯಿಸಿ, ಆದರದ ಆತಿಥ್ಯ, ಗೌರವ ನೀಡಿ ಸತ್ಕರಿಸಿ ಇಡೀ ತಿಂಗಳ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ವಿಶಿಷ್ಟ ರೀತಿಯ ನಾಟಕಗಳು, ಚಟುವಟಿಕೆಗಳು ಕನ್ನಡಿಗರನ್ನು ಬಡೆದೆಬ್ಬಿಸಿದೆ. ಮಂಗನಿಂದ ಮಾನವ ಬೆಳೆದು ಬಂದ ಬಗೆ ತೊಗಲು ಗೊಂಬೆಯಾಟದಿಂದ ಆರಂಭವಾದ ನಾಟಕ ಕ್ಷೇತ್ರ ಬೆಳೆದು ಬಂದ ರೀತಿ ಸ್ವತಃ ಮನುಷ್ಯನೇ ತಾನೇ ಪಾತ್ರ ವಹಿಸಿ, ನಿರ್ವಹಿಸಿ ಅನೇಕ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸಿದ ಯಶೋಗಾಥೆಯನ್ನು ಮಾರ್ಮಿಕವಾಗಿ ಡಾ. ರಾಮು ಮೂಲಗಿ ತೆರೆದಿಟ್ಟರು.  

ಜಾನಪದ ಕಲಾವಿದ ಬೈಲೂರ ಗ್ರಾಮದ ಗಿರಿಮಲ್ಲಪ್ಪ ಇಟಗಿ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ಪಾತ್ರಾಭಿನಯದ ಸಂಭಾಷಣೆಗಳನ್ನು ಹೇಳಿದರು ಮತ್ತು ಸನ್ಮಾನಕ್ಕೆ ಸಂತಸ ವ್ಯಕ್ತಿಪಡಿಸಿ ಕೃತಜ್ಞತೆ ಸಲ್ಲಿಸಿದರು.  

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿ, ವಂದಿಸಿದರು. ಭಿನ್ನವತ್ತಳೆ ಫಲಕ ವಾಚನವನ್ನು ಗುರು ಹಿರೇಮಠ ಮಾಡಿದರು. ಸತೀಶ ತುರಮರಿ ಹಾಗೂ ಶಂಕರ ಕುಂಬಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಡಾ. ಮಲ್ಲಿಕಾರ್ಜುನ ಪಾಟೀಲ ನಾಟಕ ರಚನೆಯ ಹುಬ್ಬಳ್ಳಿಯ ಗದಿಗೆಯ್ಯ ಹಿರೇಮಠ ನಿರ್ದೇಶನದ ‘ಮಂಡೋದರಿ ಕಲ್ಯಾಣ’ ನಾಟಕವನ್ನು ಹುಬ್ಬಳ್ಳಿಯ ಜೀವಿ ಕಲಾಬಳಗದವರು ಮನೋಜ್ಞವಾಗಿ ಪ್ರಸ್ತುತಪಡಿಸಿ, ನೆರೆದ ಸಭಿಕರನ್ನು ರಂಜಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಹಾಗೂ ಡಾ. ಮಲ್ಲಿಕಾರ್ಜುನ ಪಾಟೀಲ, ವ್ಹಿ. ಜಿ. ಪಾಟೀಲ, ಬಿ.ಕೆ. ಹೊಂಗಲ, ಸಿ.ಎಸ್‌. ಪಾಟೀಲ, ವೀರಣ್ಣ ಪತ್ತಾರ, ಶಿವ ಪಾಟೀಲ ದಂಪತಿಗಳು, ಪ್ರಮೀಳಾ ಜಕ್ಕಣ್ಣವರ, ಸವಿತಾ ನಿಲೇಗಲ್ ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ