ರಾಣೆಬೆನ್ನೂರಲ್ಲಿ ಜನ ಜಾಗ್ರತಿ ಗೋಳಿಸುವಲ್ಲಿ ಯಶಸ್ವಿ ಕಂಡ - ಜಲ ಜಾಗೃತಿ ಜಾಥಾ
ರಾಣೆಬೆನ್ನೂರು 13: ನಮ್ಮ ಪೂರ್ವಜರು ಪರಿಪೂರ್ಣ ನೀರು ಸಂಗ್ರಹಣೆಗಾಗಿ ಕೆರೆ,ಕಟ್ಟೆಗಳು ಮನೆ ಹಿಂದೆಯೇ, ತಮ್ಮ ಕುಟುಂಬದ ಅಗತ್ಯತೆಗಳಿಗೆ ಸಣ್ಣ ಪುಟ್ಟ ಭಾಗಗಳು ನಿರ್ಮಿಸಿಕೊಂಡು ಯಾವುದೇ ನೀರಿನ ತೊಂದರೆ ಇಲ್ಲದೆ ನಮ್ಮ ಪರಿಪೂರ್ಣ ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಭವಿಷ್ಯದ ನಾಗರಿಕರು ಜಲ ಕ್ಷಾಮ ಎದುರಾಗುವ ಮುನ್ನ ಇಂದು ಪ್ರತಿಯೊಬ್ಬರು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ನಗರಸಭೆ ಆಯುಕ್ತ ಫಕ್ಕೀರ್ಪ ಇಂಗಳಗಿ ಕರೆ ನೀಡಿದರು.
ಅವರ ಸೋಮವಾರ ಇಲ್ಲಿನ ಸಂಗಮ ವೃತ್ತದಲ್ಲಿ,ಖನ್ನೂರ ವಿದ್ಯಾನಿಕೇತನ, ಖನ್ನೂ ರ ಪದವಿಪೂರ್ವ ಕಾಲೇಜು, ಮತ್ತು ನರ್ಸಿಂಗ್ ಕಾಲೇಜು ಹಾಗೂ ಇಂಟ್ರಾಕ್ಟ್ ಕ್ಲಬ್ ಆಯೋಜಿಸಿದ್ದ, ಜಲ ಜಾಗೃತಿ ಜಾಥಾ, ಉದ್ಘಾಟಿಸಿ ಮಾತನಾಡಿದರು.
ನಮ್ಮ ಗ್ರಾಮೀಣ ಪರಿಸರದಲ್ಲಿ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರು ಎನ್ನುವ ಗಾದೆ ಮಾತಿದೆ.
ಗಾದೆ ಮಾತು ಗಾದೆಯಾಗಿ ಉಳಿಯಬೇಕಾದರೇ, ಇಂದು ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯವಸ್ಥೆಯ ಪ್ರಜ್ಞಾವಂತಕೆಯಲ್ಲಿರುವ ನಾವೆಲ್ಲರೂ ಒಂದಾಗಿ, ಒಗ್ಗಟ್ಟಾಗಿ ಜಲ ಕುರಿತು, ಸಾಮೂಹಿಕವಾಗಿ ಹೊಸ,ಹೊಸ ಯೋಚನೆ ಯೋಜನೆಗಳೊಂದಿಗೆ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಸಂಯೋಜಕ, ರೋಟರಿ ಅಧ್ಯಕ್ಷ ಡಾಕ್ಟರ್ ಪ್ರವೀಣ ಎಂ.ಖನ್ನೂರ ಅವರು, ಸಮಾಜದಲ್ಲಿ ಬದುಕಿ ಬಾಳಿ ಜೀವನ ಸಾಗಿಸುತ್ತಿರುವ ನಾವೆಲ್ಲರೂ ಕೂಡಿ ಏನಾದರೂ ಕೊಡುಗೆ ಕೊಡಬೇಕು ಅದುವೇ ನಿಜವಾದ ಮಾನವೀಯ ಧರ್ಮ. ಪ್ರಸ್ತುತ ಮಳೆ ಸಕಾಲಕ್ಕೆ ಬಾರದ ಪರಿಣಾಮ ಪರಿಸರದಲ್ಲಿ ಏರುಪೇರಾಗಿ ರೈತ ಸಮುದಾಯ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾನೆ.
ನೀರು ಭೂಮಿಗೆ ಬಿತ್ತಿ ತರುವುದಲ್ಲ. ಭೂಮಿಯಿಂದ ನೀರು ತರಬೇಕಾದರೆ ಅನೇಕ ಕ್ರಿಯಾ ಯೋಜನೆಗಳು ರೂಪಿಸಬೇಕಾಗುತ್ತದೆ. ಜಲಕ್ಷಾಮ ಎದುರಿಸುವ ಕಾಲ ದೂರವಿಲ್ಲ ಆದ್ದರಿಂದ ಭವಿಷ್ಯದ ಯುವ ಜನಾಂಗಕ್ಕಾಗಿ, ಜಲಕ್ಷಾಮವಿಲ್ಲದೆ, ಬದುಕಿ ಬಾಳಬೇಕಾದರೆ, ತಕ್ಷಣದಿಂದಲೇ ನೀರು ಸಂಗ್ರಹಣೆ, ಜಲ ಮೂಲಗಳ ರಕ್ಷಣೆ ಮತ್ತಿತರ ವ್ಯವಸ್ಥೆ ಮಾಡಿಕೊಳ್ಳುವ ಕುರಿತು ಇಂದಿನಿಂದಲೇ ಕಾರ್ಯಾರಂಭ ಮಾಡಬೇಕಾಗಿದೆ ಆದ್ದರಿಂದ ಇಂದು ಜನ ಜಾಗೃತಿಗಾಗಿ, ಜಲ ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದರು.
ಭವಿಷ್ಯದ ದಿನಗಳಲ್ಲಿ, ಅನೇಕ ಕ್ರಿಯೆ ಯೋಜನೆಗಳು ಇದಕ್ಕಾಗಿ ರೂಪಿಸಬೇಕಾಗಿದೆ ಇಂದಿನಿಂದಲೇ ನಾವೆಲ್ಲರೂ ಸೇರಿ ಜಲ ಸಂರಕ್ಷಣೆಗೆ, ಮುಂದಾಗಬೇಕು ಎಂದು ಕರೆ ನೀಡಿದರು.
ಕಾಲೇಜು ಪ್ರಾಚಾರ್ಯ ಜಯಶ್ರೀ ಗುಜ್ಜರ ಅವರು, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಾಗೋರ್ ಶಿಕ್ಷಣ ಸಂಸ್ಥೆ ಛೇರ್ಮನ್, ಡಾ. ಬಸವರಾಜ ಕೇಲಗಾರ, ಡಾ, ಎಂ.ಎಂ. ಅನಂತರೆಡ್ಡಿ, ಶ್ರೀಮತಿ ಭಾರತಿ ಜಂಬಿಗಿ, ರೂಪಾಲಿ ಪುನೀತ್, ಇಂಟ್ರಾಕ್ಟ್ ಚೇರ್ಮನ್ ಶಿವಯೋಗಿ ಅಂಗಡಿ, ಮತ್ತಿತರರು ನೀರು ಮತ್ತು ಜಲ ಸಂರಕ್ಷಣೆ ಅನುಸರಿಸಬೇಕಾದ ಹಿತಮಿತ ಕ್ರಮ ಕುರಿತು ಮಾತನಾಡಿದರು. ವೇದಿಕೆಯಲ್ಲಿ, ಕಾರ್ಯದರ್ಶಿ ಜಿ.ಎಸ್. ರಾಮಚಂದ್ರ, ಕೆ.ವಿ. ಶ್ರೀನಿವಾಸ್, ಉಮೇಶ್ ಹೊನ್ನಾಳಿ, ಗಣೇಶ್ ಜಾಡಮಾಲಿ,
ಸುಜಿತ್ ಜಂಬಿಗಿ, ಗೀರೀಶ್ ಬಳ್ಳಾರಿ, ಪ್ರಕಾಶ್ ಮಾಳಗಿ, ಹೆಚ್.ಹೆಚ್. ದೊಡ್ಡಮನಿ, ಸೇರಿದಂತೆ ಕಾಲೇಜಿನ ಉಪನ್ಯಾಸಕರು, ರೋಟರಿ ಸದಸ್ಯರು ಇಂಟ್ರಾಕ್ಟ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ಸಂಗಮ್ ವೃತ್ತದಿಂದ ಸಾವಿರಾರು ವಿದ್ಯಾರ್ಥಿಗಳ ಬೃಹತ್ ಜಲ ಜಾಗೃತಿ ಜಾಥಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಲೇಜು ಸಭಾಂಗಣ ವೇದಿಕೆಗೆ ಸಾಂಗತ್ಯಗೊಂಡಿತು.