ರಾಣೆಬೆನ್ನೂರ

ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಸವಾರ ಗಂಭೀರ

ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಸವಾರ ಗಂಭೀರ


ರಾಣೇಬೆನ್ನೂರು, 6: ತಾಲ್ಲೂಕಿನ ನದಿ ಹರಳಹಳ್ಳಿ ಗ್ರಾಮದಲ್ಲಿ ಮುತ್ತಣ್ಣನ ಭಟ್ಟಿ ಸಮೀಪ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.  

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ನದಿಹರಳಹಳ್ಳಿ ಗ್ರಾಮದ ನಿವಾಸಿ ಬಸವರಾಜ ಶೇಖಪ್ಪ ಬುಡನೂರು ಎಂದು ಗುರುತಿಸಲಾಗಿದೆ.  

ಬಸವರಾಜ ಅವರು ಹರಿಹರಕ್ಕೆ ಕೆಲಸಕ್ಕೆ ತೆರಳಿ, ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ನದಿಹರಳಹಳ್ಳಿ ಗ್ರಾಮಕ್ಕೆ ಮರಳುತ್ತಿದ್ದರು ಎನ್ನಲಾಗಿದೆ.  

ಇದೇ ವೇಳೆ ನದಿಹರಳಹಳ್ಳಿ ಕಡೆಯಿಂದ ಜಲ್ಲಿ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಅತಿವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.  

ಟಿಪ್ಪರ್ ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಬೈಕ್ ಸವಾರ ರಸ್ತೆಯ ಬದಿಯ ಚರಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗಾಯಾಳುವನ್ನು ಚರಂಡಿಯಿಂದ ಮೇಲಕ್ಕೆತ್ತಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.  

ಟಿಪ್ಪರ್ಗಳ ಅತಿವೇಗದ ಚಾಲನೆಗೆ ಕಡಿವಾಣಕ್ಕೆ ಆಗ್ರಹ  

ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಈ ರಸ್ತೆಯಲ್ಲಿ ಜಲ್ಲಿ ಸಾಗಿಸುವ ಟಿಪ್ಪರ್ ಲಾರಿಗಳ ಅತಿವೇಗದ ಚಾಲನೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಟಿಪ್ಪರ್ಗಳ ಅತಿವೇಗದ ಚಾಲನೆಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡು, ಇಂತಹ ಅಪಘಾತಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ