ರಾಣೆಬೆನ್ನೂರ

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳ ಬಗ್ಗೆ ಗಂಭೀರ ಕ್ರಮಕ್ಕೆ ಸೂಚನೆ

ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳ ಬಗ್ಗೆ ಗಂಭೀರ ಕ್ರಮಕ್ಕೆ ಸೂಚನೆ


          ರಾಣೆಬೆನ್ನೂರ 17:  ಪ್ರಸಕ್ತ ಸಾಲಿನ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 6 ಅಪ್ರಾಪ್ತ ಬಾಲಕಿಯರು, ಗರ್ಭಿಣಿಯಾದ ಪ್ರಕರಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ  ನಡೆದ ಬಗ್ಗೆ ಗಂಭೀರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಜಿಪಂ  ಉಪ ಕಾರ್ಯದರ್ಶಿ ಹಾಗೂ ತಾಪ ಆಡಳಿತಾಧಿಕಾರಿ ಡಾ. ಪುನೀತ್ ಸೂಚಿಸಿದರು. ಶುಕ್ರವಾರದಂದು ನಗರದ ತಾಪಂ ಸಭಾಂಗಣದಲ್ಲಿ ಏರಿ​‍್ಡಸಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪ್ರಗತಿ ಪರೀಶೀಲಿಸಿ ಮಾತನಾಡಿದರು.

           ಸುಮಾರು 15 ವರ್ಷದಿಂದ 17 ವರ್ಷದವರೆಗಿನ 7 ಅಪ್ರಾಪ್ತರು ಗರ್ಭಿಣಿಯಾಗಿದ್ದು ಇವರಲ್ಲಿ ಓರ್ವ ಅಪ್ರಾಪ್ತೆಗೆ ಅಭಾರ್ಶನ್ ಆಗಿದೆ. ಉಳಿದ ಆರು ಜನ ಅಪ್ರಾಪ್ತೆಯರ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಂಡಿದೆಎಂದು ಈ ಕುರಿತು ತಾಲೂಕ ಆರೋಗ್ಯ ಅಧಿಕಾರಿ ಪ್ರಕಾಶ್ ರವರು ಸಭೆಗೆ ಮಾಹಿತಿ ನೀಡಿದರು.    ಮೆಡ್ಲೇರಿ, ಮಾಕನೂರ್ ಭಾಗಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು ತನಿಖೆ ಮುಂದುವರೆದಿದೆ ಎಂದರು.

              ಇದಕ್ಕೆ ತೃಪ್ತರಾಗದ ಆಡಳಿತಾಧಿಕಾರಿ ಪುನೀತ್ ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿ ಡಿಪಿಓರವರು ಸಭೆಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಅಂತಿಮವಾಗಿ  ಗಂಭೀರವಾಗಿ ಈ ಪ್ರಕರಣವನ್ನು ತೆಗೆದುಕೊಳ್ಳಬೇಕು. ಅಪ್ರಾಪ್ತರು ಏಕೆ ಗರ್ಭಿಣಿಯಾದರು  ಎಂಬುದರ ಬಗ್ಗೆ ಪತ್ತೆ ಹಚ್ಚಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.  

              ತಾಲೂಕಿನಲ್ಲಿ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು 58,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇಳುವರಿ ಕಡಿಮೆಯಾಗಿದೆ. ಬೀಜ, ಗೊಬ್ಬರ ಸಮರ​‍್ಕವಾಗಿ ವಿತರಣೆ ಮಾಡಲಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರಿನಲ್ಲಿ ರಾಗಿ ಸೇರಿದಂತೆ ಸಿರಿಧಾನ್ಯ ಬೆಳೆ ಬೆಳೆಯಲು ಸೂಚಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ ರಾಜ್ಯ ಸರ್ಕಾರದಿಂದ ನೇಗಿಲಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದು ಜಿಲ್ಲೆಯಲ್ಲಿ ರಾಣೆಬೆನ್ನೂರು ಮತ್ತು ಹಿರೇಕೆರೂರ ತಾಲೂಕನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಶಾಂತ ಮಣಿ ಸಭೆಗೆ ಮಾಹಿತಿ ನೀಡಿದರು.

             ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಾಪಂ ಕಟ್ಟಡ ಕಾಮಗಾರಿ ಅನೇಕ ವರ್ಷಗಳಿಂದ ಸ್ಥಗಿತಗೊಂಡಿದ್ದು ತುರ್ತಾಗಿ ಕಾಮಗಾರಿ ಮುಗಿಸಬೇಕು. ತಡೆಯಾಜ್ಞೆ ಬಂದಿದೆ ಎಂದು ಈಗಾಗಲೇ ವಿಳಂಬ ಮಾಡಿದ್ದು, ಇನ್ನು ಯಾವುದೇ ರೀತಿಯ ನೆಪ ಹೇಳದೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  

ಕರ್ನಾಟಕ ರಾಜ್ಯದಲ್ಲಿ ರಾಣೇಬೆನ್ನೂರು, ಜೆಜೆಎಂ ನಲ್ಲಿ ದಾಖಲೆ ಮಾಡಿದೆ. ದೇವರುಗುಡ್ಡ ಹೊರತುಪಡಿಸಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಆರಂಭಗೊಂಡಿದೆ.                              ಅಂದಾಜು 60ಅ ನಷ್ಟು ಹಳ್ಳಿಗಳಲ್ಲಿ ಇದೀಗ ಜೆಜೆಎಂನಿಂದಲೇ ನೀರು ಹರಿಸಲಾಗುತ್ತಿದೆ ಎಂದು ಜಿಪಂ ಗ್ರಾಮೀಣ ಕುಡಿಯುವ ನೀರು ಯೋಜನೆಯ ಸಹಾಯಕ ಇಂಜಿನಿಯರ್ ರಾಮಕೃಷ್ಣ ವಿವರಿಸಿದರು. ತಾಲೂಕಿನ ವಿವಿಧ ಇಲಾಖೆಯ ಅಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಅವಧಿಯೊಳಗೆ ಪೂರ್ಣಗೊಳಿಸಬೇಕು . ಮುಂದೆ ಜಿಪಂ ತಾಪಂ ಚುನಾವಣೆ ಘೋಷಣೆ ಆಗಬಹುದು. ಆಗ ನೀತಿ ಸಂಹಿತೆ ಅಡ್ಡಿಯಾದರೆ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ.

              ಅದಕ್ಕಾಗಿ ಡಿಸೆಂಬರ್ 15ರೊಳಗೆ ಬಹುತೇಕ ಟೆಂಡರ್ ಆಗಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕ್ರಿಯಾಯೋಜನೆಗಳನ್ನು ತಯಾರಿಸಿದ್ದು, ಟೆಂಡರನ್ನು ಮಂಜೂರಿಗೊಳಿಸಿಕೊಳ್ಳಬೇಕು ಎಂದು ಪುನೀತ್ ರವರು ಸೂಚಿಸಿದರು. ನಿಗದಿತ ಅವಧಿ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜೊತೆಗೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸಮಸ್ಯೆಗಳು,

             ಆಕ್ಷೇಪಣೆಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು ಎಂದು ತಾಪಂ ಇಓ ಡಾ. ವೆಂಕಟೇಶ್  ಸಣ್ಣಬಿದರಿ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಗೈರಾದ ಬಗ್ಗೆ ನೋಟಿಸ್ ನೀಡಲು ಸಭೆ ಸೂಚಿಸಿತು. ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ