ಬೆಳಗಾವಿ ನಾಡಹಬ್ಬದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಚರ್ಚೆ
ಬೆಳಗಾವಿ 13 : ಆಧುನಿಕ ತಂತ್ರಜ್ಞಾನದ ಯಂತ್ರಗಳು ಮಾನವನ ಜೀವನಕ್ಕೆ ಅಧಿಕ ಅನುಕೂಲಕತೆಗಳನ್ನು ಒದಗಿಸಿವೆ. ಆದರೆ ಯಂತ್ರಗಳು ನಿರ್ದೇಶಿತ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ ಹೊಂದಿವೆ ಹೊರತಾಗಿ ಹೃದಯವಂತಿಕೆ ಮತ್ತು ಮಾನವೀಯ ಗುಣಗಳನ್ನು ಹೊಂದಿಲ್ಲ ಎಂದು ಪರಮಪೂಜ್ಯ ಬೆಳವಿಯ ಬಸವ ಶರಣ ಶ್ರೀಗಳು ಹೇಳಿದರು. ಸೋಮವಾರ, ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಜರುಗುತ್ತಿರುವ 99 ನಾಡಹಬ್ಬ ಉತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ’ಕೃತಕ ಬುದ್ಧಿಮತ್ತೆ (ಎಐ) ವಿಶ್ವದ ಭವಿಷ್ಯಕ್ಕೆ ಅವಕಾಶಗಳು ಮತ್ತು ಎಚ್ಚರಿಕೆಗಳು’ ವಿಷಯದ ಕುರಿತಾಗಿ ಅವರು ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕಲೆ, ಧರ್ಮ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಯುವಜನಾಂಗಕ್ಕೆ ಸಂಸ್ಕಾರ ಲಭಿಸುತ್ತದೆ. ಆದರೆ ಇಂದು ಮೊಬೈಲ್, ತಂತ್ರಜ್ಞಾನ ಮತ್ತು ಎಐ ಈ ಎಲ್ಲ ಸಂಗತಿಗಳು ಯುವಜನಾಂಗ ಸಂಸ್ಕಾರ ಹೀನರನ್ನಾಗಿಸಿವೆ ಎಂದು ಖೇಧ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಅರುಣ ಹೊಸಮಠ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ಇಂದಿನ ದಿನಗಳಲ್ಲಿ ಬಹು ಮುಖ್ಯವಾದ ಕೌಶಲ್ಯವಾಗಿ ಪರಿಗಣಿಸಲಾಗುತ್ತಿದೆ. ಆದ್ದರಿಂದ ಸರ್ಕಾರ ಪ್ರಾಯೋಜಕತ್ವದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನೆಗಳು ಜರಗುತ್ತಿವೆ. ಶಿಕ್ಷಣ, ವೈದ್ಯಕೀಯ, ಓದ್ಯೋಗಿಕ, ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತನ್ನ ಛಾಪು ಮೂಡಿಸುತ್ತಿದೆ ಎಂದು ಹೇಳಿದರು.ತಂತ್ರಜ್ಞಾನ ಮತ್ತು ಎಐ ಈ ಸಂಗತಿಗಳು ಪ್ರಬುದ್ಧತೆಯಿಂದ ಮಿತವಾಗಿ ಬಳಸಲು ಮುಂದಾಗಬೇಕು. ಎಐ ನೀಡುವ ಮಾಹಿತಿ ಸಂಪೂರ್ಣವಾಗಿ ಸತ್ಯವಾಗಿ ಇರುತ್ತವೆ ಎಂಬುದೆನ್ನಿಲ್ಲಾ. ಹಾಗಾಗೀ ಎಐ ನೀಡಿದ ಮಾಹಿತಿ ಮತ್ತೊಮ್ಮೆ ಎಲ್ಲರೂ ಪರಾಮರ್ಶಿಸಬೇಕು. ಬಳಸುವವರ ಉದ್ದೇಶ - ದುರುದ್ದೇಶದ ಆಧಾರದ ಮೇಲೆ ಎಐ ಭವಿಷ್ಯ ಅಡಗಿದೆ ಹಾಗಾಗಿ ಪ್ರಜ್ಞಾವಂತಿಕೆಯಿಂದ ರಚನಾತ್ಮಕ ಸಂಗತಿಗಳಿಗೆ ಎಐ ಬಳಕೆಯಾದಲ್ಲಿ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಸಮಾಜದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ತಿಳಿಸಿದರು.ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರಾದ ಚಂದನಾ ಗುಳಗುಲೆ, ಅಕ್ಷರಾ ಕೊಡ್ಲಿ, ಅರ್ಿತಾ ಬೊಮ್ಮಗೋಳ, ಸುಶ್ಮಿತಾ ಗೌರಿ, ಲಕ್ಷ್ಮೀ ಹೊಸಕೋಟೆ ಕೃತಕ ಬುದ್ಧಿಮತ್ತೆ ಕುರಿತಾಗಿ ವಿಷಯ ಮಂಡಿಸಿದರು.ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚೈತ್ರಾ ಮೊಕಾಶಿ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸವದತ್ತಿಯ ಹಿರೇಬೂದನೂರ ಯಲ್ಲಪ್ಪ ನಾಯ್ಕರ್ ತಂಡದ ಸದಸ್ಯರು ಶ್ರೀ ಕೃಷ್ಣ ಪಾರಿಜಾತ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಕೆಎಲ್.ಇ ನಿರ್ದೇಶಕ ಡಾ. ಹೆಚ್.ಬಿ. ರಾಜಶೇಖರ, ಹಿರಿಯ ಸಾಹಿತಿ ಯ.ರು ಪಾಟೀಲ ಸ್ವಾಗತಿಸಿದರು. ಡಾ. ಪಿ.ಜಿ. ಕೆಂಪಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿ.ಕೆ ಜೋರಾಪುರ, ಉಪಾಧ್ಯಕ್ಷರು, ನ್ಯಾಯವಾದಿ ಆರ್. ಪಿ. ಪಾಟೀಲ, ಡಾ. ಬಸವರಾಜ ಜಗಜಂಪಿ, ಸೋಮಶೇಖರ್ ಮಾವಿನಕಟ್ಟಿ, ಗುರುಗೌಡ ಪಾಟೀಲ, ಹೆಚ್. ಬಿ. ತಿಮ್ಮಾಪೂರ, ಸುಮಿತ್ರಾ ಮಲ್ಲಾಪುರ, ಅನ್ನಪೂರ್ಣ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ ನಾಡಗೀತೆ ಹಾಡಿದರು. ಬಸವರಾಜ ಗಾರ್ಗಿ ನಿರೂಪಿಸಿದರು. ಸುಜಾತಾ ಉಳ್ಳಾಲ, ವಂದಿಸಿದರು.