ವಿಜಯವಾಡ ಬೈಪಾಸ್ ರಸ್ತೆಯಲ್ಲಿ ಡಿವೈಡರ್‌ಗೆ ಎಲೆಕ್ಟ್ರಿಕ್ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು
ವಿಜಯವಾಡ, ಅ. 12 : ವಿಜಯವಾಡ ಸಮೀಪದ ವೆಸ್ಟ್ ಬೈಪಾಸ್ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಈ ದುರಂತ ಸಂಭವಿಸಿದೆ.
ಮೃತರನ್ನು ಕೊಮ್ಮರೆಡ್ಡಿ ರಾಮದೇವ್ (39), ಅವರ ಪತ್ನಿ ಕೆ. ಅರುಣಾ (34), ತಾಯಿ ಕೊಮ್ಮರೆಡ್ಡಿ ಅರುಣಾ (62) ಮತ್ತು ಟಿ. ವಿಜಯ್ ಎಂದು ಗುರುತಿಸಲಾಗಿದೆ.
ಕುಟುಂಬದ ಸದಸ್ಯರು ಗುಂಟೂರು ಜಿಲ್ಲೆಯ ನಂಬೂರು ಗ್ರಾಮಕ್ಕೆ ಭೇಟಿ ನೀಡಿ, ತಮ್ಮ ಸ್ವಗ್ರಾಮ ನುನ್ನಾಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರೂ ಹೊರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಎಚ್) ರವಾನಿಸಿದ್ದಾರೆ.
ಸಾರಿಗೆ ಸಚಿವ ಎಂ. ಪ್ರಸಾದ್ ರೆಡ್ಡಿ ಅವರು ಘಟನೆಯ ಬಗ್ಗೆ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.