ಸ್ಥಗಿತಗೊಂಡ ಪಿಂಚಣಿ ಕೂಡಲೇ ಬಿಡುಗಡೆಗೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಆಗ್ರಹ
ಧಾರವಾಡ : 7 ತಿಂಗಳಿನಿಂದ ಸ್ಥಗಿತಗೊಳಿಸಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನಾ ಧರಣಿಕಳೆದ 7 ತಿಂಗಳಿನಿಂದ ಸ್ಥಗಿತಗೊಳಿಸಿರುವ ಎಲ್ಲ ವಿಧದ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು. ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ, ಕೊಳಗೇರಿಗಳಿಂದ ಭಾಗವಹಿಸಿದ್ದ ಪ್ರತಿಭಟನಾಕಾರರು ಬದುಕಿಗೆ ಆಸರೆಯಾಗಿದ್ದ ಪಿಂಚಣಿ ಕೊಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿ, ಆಗಸ್ಟ್ ತಿಂಗಳಿನಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದಿಂದ ವೃದ್ದರ, ವಿಧವೆಯರ, ವಿಶೇಷ ಚೇತನರ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಹೋರಾಡಿದ ಫಲವಾಗಿ ಆದಾಯ ಮಿತಿಯನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಸರ್ಕಾರವು ಹೆಚ್ಚಿಸಿತ್ತು. ಆದರೆ ಹೋರಾಟ ಮಾಡಿ ಎರಡು ತಿಂಗಳು ಕಳೆದರೂ ಇನ್ನೂ ಪಿಂಚಣಿ ಹಣವು ಜನತೆಯ ಕೈಗೆ ಸೇರಿಲ್ಲ. ಇಂದಿನ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತು ಅತ್ಯಂತ ಗಂಭೀರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೈತ, ಕೃಷಿ ಕಾರ್ಮಿಕರಿಗೆ ಸರ್ಕಾರವು ಸಹಾಯ ಹಸ್ತವನ್ನು ನೀಡುವ ಬದಲಾಗಿ ಪಿಂಚಣಿ ರದ್ದುಗೊಳಿಸಿರುವುದು ಅಮಾನವೀಯ, ಬಡಜನ ವಿರೋಧಿ ನಡೆಯಾಗಿದೆ. ಇಡೀ ರಾಜ್ಯದ್ಯಂತ 18,06,032 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ದಾಖಲೆಗಳ ಮರುಪರೀಶೀಲನೆಯ ನೆಪದಲ್ಲಿ ಬಡತನ ರೇಖೆಗಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಸಮಾಜದ ಆರ್ಥಿಕ ದುರ್ಬಲರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ದಾಖಲೆಗಳನ್ನು ಕ್ರೂಢೀಕರಿಸಿ ಒದಗಿಸುವ ಪ್ರಯಾಸಕರ ಪರಿಸ್ಥಿತಿಗೆ ತಳ್ಳಿದೆ. ವೃದ್ಧರು, ವಿಧವೆಯರು, ವಿಶೇಷ ಚೇತನರು ಈ ಪ್ರಕ್ರಿಯೆಯಲ್ಲಿ ರೋಸಿ ಹೋಗಿದ್ದಾರೆ. ಕೊನೆಗೂ ದಾಖಲೆಗಳನ್ನು ಒದಗಿಸಿ ಹಲವು ತಿಂಗಳುಗಳು ಕಳೆದರೂ ಪಿಂಚಣಿ ಹಣ ಕೈಗೆ ಸೇರಿಲ್ಲ. ಮಧುಮೇಹ, ಬಿಪಿ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿರುವುದು ಒಂದೆಡೆಯಾದರೆ ಕುಟುಂಬಸ್ಥರ ಆಸರೆಯಿಲ್ಲದೆ ಒಂಟಿ ಜೀವನ ನಡೆಸುತ್ತಿರುವವರು ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಪಿಂಚಣಿಯನ್ನು ಬಿಡುಗಡೆ ಮಾಡಿ, ಪಿಂಚಣಿ ಹಣವನ್ನು ಹೆಚ್ಚಿಸಿ ಮತ್ತು ಬಾಕಿ ಇರುವ ಏಳೆಂಟು ತಿಂಗಳ ಪಿಂಚಣಿ ಹಣವನ್ನು ಅರ್ಹ ಪಿಂಚಣಿದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನು ಅರ್ಥ ಮಾಡಿಕೊಂಡು ಜನತೆ ಬಲಿಷ್ಠ ಹೋರಾಟವನ್ನು ಕಟ್ಟಲು ಮುಂದೆ ಬರಬೇಕೆಂದು ಕರೆ ನೀಡಿದರು. ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಭವಾನಿಶಂಕರ್ ಎಸ್ ಗೌಡ ಪ್ರತಿಭಟನಾ ಧರಣಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಶರಣು ಗೋನವಾರ, ಮಧುಲತಾ ಗೌಡರ್, ದೀಪಾ ಧಾರವಾಡ ಇನ್ನಿತರರು ಇದ್ದರು.