ಧಾರವಾಡ - ಹುಬ್ಬಳ್ಳಿ

ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ ಜಾಗೃತಿ ಕಾರ್ಯಕ್ರಮ

ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ ಜಾಗೃತಿ ಕಾರ್ಯಕ್ರಮ



ಹುಬ್ಬಳ್ಳಿ 11 : ನಶೆಯ ಚಟಕ್ಕೆ ಬಲಿಯಾಗುವುದರಿಂದ ಯುವಜನರು ತಮ್ಮ ಅಮೂಲ್ಯವಾದ ಜೀವನ, ಆರೋಗ್ಯ, ಶಿಕ್ಷಣ, ಗುರಿ ಮತ್ತು ಭವಿಷ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ವಿದ್ಯಾರ್ಥಿ ಜೀವನವು ಸಾಧನೆ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ವೀಣಾ ಎನ್‌. ಹೇಳಿದರು.ನಗರದ ಕೆ.ಎಸ್‌.ಎಸ್‌. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಶುಕ್ರವಾರ ಡಾ. ಬಿ.ಎಫ್‌. ದಂಡಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಮಾತನಾಡಿದ ಅವರು, ಯುವಜನರು ನಶೆಯ ಚಟಕ್ಕೆ ಹೇಗೆ ಆಕರ್ಷಿತರಾಗುತ್ತಾರೆ, ಅದರ ಪರಿಣಾಮವಾಗಿ ಅವರ ಜೀವನದಲ್ಲಿ ಎದುರಾಗುವ ಸಮಸ್ಯೆಗಳೇನು ಎಂಬುದನ್ನು ವಿವರಿಸಿದರು. ಸ್ನೇಹಿತರ ಒತ್ತಡ, ಕುತೂಹಲ, ಅನುಕರಣೆಯ ಮನೋಭಾವ ಹಾಗೂ ಕ್ಷಣಿಕ ಸಂತೋಷದ ಆಸೆಯಿಂದ ಕೆಲವರು ತಂಬಾಕು ಮತ್ತು ಇತರ ಮಾದಕ ವಸ್ತುಗಳ ಬಳಕೆಗೆ ಮುಂದಾಗುತ್ತಾರೆ. ಆರಂಭದಲ್ಲಿ ಸಣ್ಣ ಅಭ್ಯಾಸವೆಂದು ಕಾಣಿಸುವ ಇಂತಹ ದುಶ್ಚಟಗಳು ಕ್ರಮೇಣ ವ್ಯಸನವಾಗಿ ಬದಲಾಗುವ ಸಾಧ್ಯತೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.  


ಸುದ್ದಿ ಓದಿ