ಕೆಎಸ್‌ಟಿಡಿಸಿಯೊಂದಿಗೆ ಚೌಲ್ಟ್ರಿ ಒಪ್ಪಂದ ರದ್ದುಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಟಿಟಿಡಿ ಮಂಡಳಿ ಸದಸ್ಯರ ಆಗ್ರಹ
ತಿರುಪತಿ, ಅ. 11 : ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಚೌಲ್ಟ್ರಿಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ವಹಿಸುವ ಸಂಪುಟ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಈ ಸಂಬಂಧದ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ರದ್ದುಗೊಳಿಸಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಸದಸ್ಯ ಜಿ. ಭಾನು ಪ್ರಕಾಶ್ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ, ಸರ್ಕಾರದ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿರುವ ಅವರು, ಇದು ಗುತ್ತಿಗೆಯ ಷರತ್ತುಗಳು, ಆಂಧ್ರಪ್ರದೇಶದ 1987ರ ಧಾರ್ಮಿಕ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ದತ್ತಿ ಕಾಯ್ದೆಯ ಕಾನೂನುಬದ್ಧ ನಿಬಂಧನೆಗಳು ಮತ್ತು ಆಸ್ತಿಯನ್ನು ಹಂಚಿಕೆ ಮಾಡಿದ ದತ್ತಿ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ತಿರುಮಲದಲ್ಲಿರುವ 6.47 ಎಕರೆ ಜಮೀನು ಟಿಟಿಡಿಗೆ ಸೇರಿದ್ದು, ಅದನ್ನು 2020ರ ಏಪ್ರಿಲ್ 1ರಿಂದ 2050ರ ಮಾರ್ಚ್ 31ರವರೆಗೆ 30 ವರ್ಷಗಳ ಅವಧಿಗೆ ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ಚದರ ಅಡಿಗೆ ವಾರ್ಷಿಕ 2.30 ರೂ.ಗಳ ನಾಮಮಾತ್ರ ನೆಲಬಾಡಿಗೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡುವ ಕರ್ನಾಟಕದ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಾತ್ರ ಈ ಜಮೀನನ್ನು ಹಂಚಿಕೆ ಮಾಡಲಾಗಿದೆ. ವಾಣಿಜ್ಯ ಸಂಸ್ಥೆಗೆ ಆಸ್ತಿಯನ್ನು ವರ್ಗಾಯಿಸಲು ಅಥವಾ ಉಪಗುತ್ತಿಗೆ ನೀಡಲು ಗುತ್ತಿಗೆಯ ಷರತ್ತುಗಳು ಅನುಮತಿ ನೀಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೆಎಸ್‌ಟಿಡಿಸಿಯೊಂದಿಗೆ ಪ್ರಸ್ತಾಪಿಸಿರುವ ಶೇ.50:50ರ ಲಾಭ ಹಂಚಿಕೆ ವ್ಯವಸ್ಥೆಯನ್ನು ವಿರೋಧಿಸಿದ ರೆಡ್ಡಿ, ಈ ಕ್ರಮವು ಯಾತ್ರಾರ್ಥಿಗಳ ಸೇವೆಗಾಗಿ ಸ್ಥಾಪಿಸಲಾದ ದತ್ತಿ ಸೌಲಭ್ಯವನ್ನು ವಾಣಿಜ್ಯೀಕರಣಗೊಳಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಹೋಟೆಲ್ ಮಾದರಿಯ ಕಾರ್ಯಾಚರಣೆಗಳನ್ನು ಜಾರಿಗೆ ತರುವ ಪ್ರಸ್ತಾವನೆ ಹಾಗೂ ಕೆಲವು ವಸತಿ ವಿಭಾಗಗಳಲ್ಲಿ ಶೇ.50ರಷ್ಟು ಕೊಠಡಿಗಳನ್ನು ಇಲಾಖೆಯ ಶಿಫಾರಸು ಪತ್ರಗಳ ಮೂಲಕ ಕಾಯ್ದಿರಿಸುವ ಯೋಜನೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯವಸ್ಥೆಯಿಂದ ಸಾಮಾನ್ಯ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯ ಪಡೆಯಲು ತೊಂದರೆಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ಸರ್ಕಾರವು ಸಂಪುಟ ಟಿಪ್ಪಣಿ ಸಂಖ್ಯೆ C. 237/2026 ಅನ್ನು ಹಿಂಪಡೆಯಬೇಕು, 2026ರ ಅಕ್ಟೋಬರ್ 1ರಂದು ಮಾಡಿಕೊಂಡಿರುವ ಎಂಒಯು ಅನ್ನು ರದ್ದುಗೊಳಿಸಬೇಕು ಮತ್ತು ಚೌಲ್ಟ್ರಿ ಆವರಣವನ್ನು ಕೆಎಸ್‌ಟಿಡಿಸಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತಡೆಯಬೇಕು ಎಂದು ರೆಡ್ಡಿ ಆಗ್ರಹಿಸಿದ್ದಾರೆ.
ಅಲ್ಲದೆ, ಈ ಚೌಲ್ಟ್ರಿಯನ್ನು ಲಾಭರಹಿತ ದತ್ತಿ ಸೌಲಭ್ಯವಾಗಿ ಮುಂದುವರಿಸಿ, ಭಕ್ತರ ಸೇವೆಗಾಗಿ ಕರ್ನಾಟಕದ ಮುಜರಾಯಿ ಇಲಾಖೆಯೇ ನೇರವಾಗಿ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಮನವಿಯ ಪ್ರತಿಗಳನ್ನು ಅಗತ್ಯ ಕ್ರಮ ಕೈಗೊಳ್ಳುವಂತೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಹಾಗೂ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೂ ಸಲ್ಲಿಸಲಾಗಿದೆ.