ದಾಂಡಿಯಾ ನೃತ್ಯದಿಂದ ಮಹಿಳೆಯರ ಆರೋಗ್ಯ ಸುಧಾರಣೆ
ಮಾಜಿ ಮೇಯರ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಡಹಬ್ಬ ದಸರಾ ಹಿಂದೆ ಮೈಸೂರು ನಗರಕ್ಕೆ ಸೀಮಿತವಾಗಿತ್ತು. ಆದರೆ ಇಂದು ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಾಡಿನ ವಿವಿಧ ಭಾಗಗಳಲ್ಲಿಯೂ ಯುವಪಡೆ ಸೇರಿದಂತೆ ಎಲ್ಲ ವರ್ಗದ ಜನರು ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೇಳಿದರು.ಕೊಪ್ಪದಕೇರಿಯ ಶಿವಾಲಯದ ಸಭಾಭವನದಲ್ಲಿ ಕಲಾಶಕ್ತಿ ಫೌಂಡೇಶನ್ ಧಾರವಾಡ ವತಿಯಿಂದ ಅಕ್ಟೋಬರ್ 3ರಿಂದ 18ರವರೆಗೆ ಆಯೋಜಿಸಿರುವ ದಾಂಡಿಯಾ ನೃತ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದಾಂಡಿಯಾ ನೃತ್ಯವು ಕೇವಲ ಮನರಂಜನೆಯ ಕಲೆಯಲ್ಲ; ಮಹಿಳೆಯರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಹಿಳಾ ಮುಖಂಡರಾದ ಹೇಮಾಕ್ಷಿ ಕಿರೇಸೂರ ಮಾತನಾಡಿ, ಮಹಿಳೆಯರೇ ನಾಡಿನ ನಿಜವಾದ ಶಕ್ತಿ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಕಾರ್ಯವೂ ಅಸಾಧ್ಯವಲ್ಲ. ಕಳೆದ ಹತ್ತು ವರ್ಷಗಳಿಂದ ಕಲಾಶಕ್ತಿ ಫೌಂಡೇಶನ್‌ನ ಕಾರ್ಯವೈಖರಿಯನ್ನು ಗಮನಿಸುತ್ತಿದ್ದು, ಸಂಸ್ಥೆಯು ಮಹಿಳೆಯರಿಗೆ ಉತ್ತಮ ತರಬೇತಿ ನೀಡುವುದರ ಜೊತೆಗೆ ನಿರಂತರ ಪ್ರೋತ್ಸಾಹವನ್ನೂ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತಾನಡಿ ನೂರಾರು ಮಹಿಳೆಯರನ್ನು ಒಂದೇ ವೇದಿಕೆಯಡಿ ಸೇರಿಸಿ ತರಬೇತಿ ನೀಡುವುದು ಸುಲಭದ ಕೆಲಸವಲ್ಲ. ಬಾಲ್ಯದಿಂದಲೂ ನೃತ್ಯದ ಕನಸು ಕಂಡ ಅನೇಕ ಮಹಿಳೆಯರಿಗೆ ತಮ್ಮ ಆಸಕ್ತಿಯನ್ನು ಸಾಕಾರಗೊಳಿಸಿಕೊಳ್ಳಲು ಕಲಾಶಕ್ತಿ ಫೌಂಡೇಶನ್ ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಮನೆಯ ಜವಾಬ್ದಾರಿಗಳು ಮತ್ತು ಒತ್ತಡಗಳ ನಡುವೆ ಮಹಿಳೆಯರು ಸ್ವಲ್ಪ ಸಮಯ ತಮ್ಮಿಷ್ಟದ ಕಲೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಮೂಲಕ, ನೃತ್ಯದ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಸಂಸ್ಥೆಯ ಮುಖ್ಯಸ್ಥ ಮಲ್ಲನಗೌಡ ಪಾಟೀಲ ಹಾಗೂ ತಂಡ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕಲಾಶಕ್ತಿ ಫೌಂಡೇಶನ್‌ನ ಮುಖ್ಯಸ್ಥ ಮಲ್ಲನಗೌಡ ಪಾಟೀಲ ಮಾತನಾಡಿ, ಸಂಸ್ಥೆಯು ದಾಂಡಿಯಾ ನೃತ್ಯ ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ಮಹಿಳೆಯರು ಮತ್ತು ಯುವಜನರು ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತಿದೆ. ಇದರ ಭಾಗವಾಗಿ ಹೋಟೆಲ್ ಮಂದಾರ, ಕಾಲೇಜು ರಸ್ತೆ, ಧಾರವಾಡ ಇವರ ಪ್ರಾಯೋಜಕತ್ವದಲ್ಲಿ ‘ಕಲಾಶಕ್ತಿ ದಾಂಡಿಯಾ ಉತ್ಸವ–2026’ ಅನ್ನು ಅಕ್ಟೋಬರ್ 18ರಂದು ಭಾನುವಾರ ಸಂಜೆ 6 ಗಂಟೆಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಿ. ಎಸ್. ಪಾಟೀಲ, ಜಯಂತಿಲಾಲ ಜೈನ್, ಶಶಿಕಲಾ ಹೆಬ್ಳೀಕರ್, ರಾಕೇಶ್ ನಾಝರೆ, ಶೇಖರ್ ಕವಳಿ, ಸಲೀಂ ಬರ್ಚಿವಾಲೆ ಹಾಗೂ ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ ಉಪಸ್ಥಿತರಿದ್ದರು.