ಕಾರವಾರ

ಪದವಿ ಕಾಲೇಜುಗಳಲ್ಲಿನ ಸಿಡಿಸಿ ಮತ್ತು ಹೊರ ಗುತ್ತಿಗೆ ನೌಕರರ ರಕ್ಷಿಸಲು ಮನವಿ

ಪದವಿ ಕಾಲೇಜುಗಳಲ್ಲಿನ ಸಿಡಿಸಿ ಮತ್ತು ಹೊರ ಗುತ್ತಿಗೆ ನೌಕರರ ರಕ್ಷಿಸಲು ಮನವಿ
ಕಾರವಾರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕವು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ  ಸೋಮವಾರ ಮನವಿ ಸಲ್ಲಿಸಿತು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 10ರಿಂದ 15 ವರ್ಷಗಳಿಂದ ಅನ್‌ಸ್ಕಿಲ್ಡ್, ಸಿಡಿಸಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1000 ನೌಕರರನ್ನು 2026ರ ಅಕ್ಟೋಬರ್ 31ರಂದು ಸೇವೆಯಿಂದ ಬಿಡುಗಡೆಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ನಿರ್ಧಾರದಿಂದ ಹಲವು ವರ್ಷಗಳಿಂದ ಕಾಲೇಜುಗಳ ಆಡಳಿತಾತ್ಮಕ ಮತ್ತು ದೈನಂದಿನ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕಡಿಮೆ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಈ ನೌಕರರ ಜೀವನೋಪಾಯಕ್ಕೆ ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ದೊಡ್ಡ ಹೊಡೆತ ನೀಡಲಿದೆ. ಸುಮಾರು 1000 ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದ್ದು, ಹಲವು ವರ್ಷಗಳ ಸೇವೆ ಸಲ್ಲಿಸಿರುವ ನೌಕರರ ಭವಿಷ್ಯ ಅನಿಶ್ಚಿತತೆಯಲ್ಲಿದೆ ಎಂದು ಸಂಘದ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.ಸಿಡಿಸಿ ಮತ್ತು ಹೊರ ಗುತ್ತಿಗೆ ನೌಕರರ ಕುಟುಂಬಗಳ ಹಿತದೃಷ್ಟಿಯಿಂದ ಸೇವೆಯಿಂದ ಬಿಡುಗಡೆಗೊಳಿಸುವ ಆದೇಶವನ್ನು ಮರುಪರಿಶೀಲಿಸಿ, ಅವರ ಸೇವೆಯನ್ನು ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ಕುರಿತು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡುವಂತೆ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಮಿತಕುಮಾರ ನಾಗರಾಜ ಜೋಗಳೇಕರ, ರೇಣುಕಾ ಕುಡಾಳ್ಕರ್, ಸಹನಾ ದುರ್ಗೇಕರ್, ಪ್ರಹ್ಲಾದ್ ಜೋಗಳೇಕರ, ಸುರೇಶ್ ಕೊರವರ, ಶಹನಾಜ ರಾಮಾಪುರ, ಪರಶುರಾಮ ಬಿ. ಚಲವಾದಿ,  ಜಯಾ ಕಾರವಾರ ,ಶಿವರಂಜನ ಆಗೇರ, ರಾಘವೇಂದ್ರ ಮುರುಡೇಶ್ವರ ಉಪಸ್ಥಿತರಿದ್ದರು.

ಸುದ್ದಿ ಓದಿ