ಕೈಗಾ ಅಣುಸ್ಥಾವರ ಘಟಕ-1: ಪುನಃ ವಿದ್ಯುತ್ ಉತ್ಪಾದನೆಗೆ ಸಜ್ಜು: 18 ತಿಂಗಳಲ್ಲಿ ನವೀಕರಣ ಕಾರ್ಯ ಪೂರ್ಣ
ಕಾರವಾರ 25 : ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತದ (ಎನ್ಪಿಸಿಐಎಲ್) ಆರನೇ ಪರಮಾಣು ಕೇಂದ್ರವಾದ ಕೈಗಾದಲ್ಲಿ ಘಟಕ -1ರ ನವೀಕರಣ ಕಾರ್ಯ ಪೂರ್ಣವಾಗಿದ್ದು, ನ.22 ರಂದು ವಿದ್ಯುತ್ ಉತ್ಪಾದನಾ ಆರಂಭಿಕ ಕ್ರಿಯೆಗೆ ಚಾಲನೆ ಸಿಕ್ಕಿದೆ. ಅಣು ವಿದಳನ ಕ್ರಿಯೆ ಆರಂಭವಾಗಿದ್ದು, ಸದ್ಯದಲ್ಲೇ ದಕ್ಷಿಣ ಭಾರತದ ಗ್ರಿಡ್ಗೆ ವಿದ್ಯುತ್ ಸರಬರಾಜು ಆರಂಭವಾಗುವ ಕ್ಷಣಗಳು ಸಮೀಪಿಸಿವೆ.
ಕೈಗಾದಲ್ಲಿ ಘಟಕ -1 ಸತತ 24 ವರ್ಷ ವಿದ್ಯುತ್ ಉತ್ಪಾದನೆ ಮಾಡಿದ ನಂತರ ರಿಯಾಕ್ಟರಲ್ಲಿ ವಿದ್ಯುತ್ ಉತ್ಪಾದನೆಗೆ ವಿರಾಮ ಹಾಕಲಾಗಿತ್ತು. ಕೈಗಾದ ಮೊದಲ ಘಟಕ ತನ್ನ ದುಡಿಮೆಯನ್ನು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಿದ ನಂತರ ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ ನಿಯಮದ ಪ್ರಕಾರ ನವೀಕರಣ ಕಾರ್ಯಕ್ಕೆ ಘಟಕವನ್ನು ಸ್ಥಗಿತ ಮಾಡಲಾಗಿತ್ತು.
ಹದಿನೆಂಟು ತಿಂಗಳು ಗಳಲ್ಲಿ ಘಟಕ ಒಂದಕ್ಕೆ ರಿಯಾಕ್ಟರ್ ನಿರ್ವಹಣೆ, ಫ್ಯುಯಲ್ ಬಂಡಲ್ ಜೋಡಣೆ, ವಿದ್ಯುತ್ ಉತ್ಪಾದನಾ ನಿಯಂತ್ರಣ ಘಟಕದ ನವೀಕರಣ ಪೂರ್ಣಗೊಳಿಸಿದ ನಂತರ ನಾಲ್ಕು ದಿನದ ಹಿಂದೆ ರಿಯಾಕ್ಟರ್ ತನ್ನ ಪರೀಕ್ಷಾರ್ಥ ಪ್ರಯೋಗ ಆರಂಭಿಸಿದೆ. ಭಾರಜಲ ಘಟಕ ಆಧಾರಿತ ಕೈಗಾ ಅಣುವಿದ್ಯುತ್ ಸ್ಥಾವರ ಹದಿನೆಂಟು ತಿಂಗಳಲ್ಲಿ ನವೀಕರಣ ಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೈಗಾ ಅಣುವಿದ್ಯುತ್ ಸ್ಥಾವರ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗಾ ಅಣುವಿದ್ಯುತ್ ಸ್ಥಾವರ ಘಟಕ-1 : ಈ ಹಿಂದೆ ನಿರಂತರವಾಗಿ 962 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದಿಸಿ, ವಿಶ್ವ ದಾಖಲೆಯನ್ನು ಹೊಂದಿದೆ.ಕೈಗಾದಲ್ಲಿ ಒಟ್ಟು 2280 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ: ಕರ್ನಾಟಕದ ಕೈಗಾದಲ್ಲಿ ಒಟ್ಟು 2280 ಮೆಗಾ ವ್ಯಾಟ್ ಸಾಮರ್ಥ್ಯದ ಆರು ಹೆವಿ ವಾಟರ್ ರಿಯಾಕ್ಟರ್ ಘಟಕಗಳಿವೆ. ಇವುಗಳಲ್ಲಿ ನಾಲ್ಕು ಘಟಕಗಳು ತಲಾ220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ.
ಘಟಕ 5 ಮತ್ತು 6 ನಿರ್ಮಾಣ ವಾಗುತ್ತಿವೆ. 5 ಮತ್ತು 6 ನೇ ಘಟಕಗಳು ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದವು. ಈ ಎರಡು ಘಟಕಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ.ಘಟಕ 2,3 ಮತ್ತು 4 ಘಟಕಗಳು ಕಾರ್ಯಾಚರಣೆಯಲ್ಲಿರುವ ಘಟಕಗಳು. ಇವು ನಿಗದಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಡೆಯುತ್ತಿವೆ....