ತಾಳಿಕೋಟಿ

ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ: ಪೂಜ್ಯ ಸಿದ್ದಲಿಂಗ ಶ್ರೀ

ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ: ಪೂಜ್ಯ ಸಿದ್ದಲಿಂಗ ಶ್ರೀ

             ತಾಳಿಕೋಟಿ 25: ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಈ ಜಗತ್ತನ್ನು ಒಂದು ದಿನ ಬಿಟ್ಟು ಹೋಗಬೇಕಾಗಿದೆ ಭೂಮಿಯ ಮೇಲೆ ಬದುಕಿರುವಷ್ಟು ದಿನ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರಲು ಪ್ರಯತ್ನಿಸಿ ಎಂದು ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಸಿದ್ದಲಿಂಗ ದೇವರು ಹೇಳಿದರು.

            ಮಂಗಳವಾರ ಪಟ್ಟಣದ ಡಾ. ಅಂಬೇಡ್ಕರ ನಗರದಲ್ಲಿ" ಅಜ್ಜನ ನಡೆ ಸಮೃದ್ಧ ಸಮಾಜದ ಕಡೆ" ಕಾರ್ಯಕ್ರಮದ ನಿಮಿತ್ಯವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಮ್ಮ ಮನೆ ಬಾಗಿಲಿಗೆ ಬರುವ ಶರಣರನ್ನು ಭಕ್ತಿ ಭಾವದೊಂದಿಗೆ ಸ್ವಾಗತಿಸಿ ಅವರನ್ನು ಸತ್ಕರಿಸುವ ದೊಡ್ಡ ಮನಸ್ಸು ನಿಮ್ಮದಾಗಿದೆ.

             ನೀವು ಕಾಯಕದಲ್ಲಿ ಭಗವಂತನನ್ನು ಕಾಣುವವರಾಗಿದ್ದೀರಿ, ಭಗವಂತ ಬೇರೆ ಎಲ್ಲಿಯೂ ಇಲ್ಲ ನಿಮ್ಮ ಮನಸ್ಸಿನಲ್ಲಿದ್ದಾನೆ. ಈ ಸಮಾಜದ ಯುವಕರು ಯಾವುದೇ ಕೆಟ್ಟ ವ್ಯಸನಗಳ ದಾಸರಾಗಬಾರದು, ಈ ಉದ್ದೇಶಕ್ಕಾಗಿಯೇ ನಾನು ಈ ಅಭಿಯಾನವನ್ನು ಇಡೀ ತಾಲೂಕಿನಲ್ಲಿ ನಡೆಸುತ್ತಿದ್ದೇನೆ ನಿಮ್ಮ ಬದುಕು ಸಂತೋಷದಿಂದ ಕೂಡಿರಬೇಕೆಂಬುದೇ ನನ್ನ ಆಶಯವಾಗಿದೆ.                       ಲಿಂಗೈಕ ಖಾಸ್ಗತ ಹಾಗೂ ವಿರಕ್ತ ಅಜ್ಜನವರ ಆಶೀರ್ವಾದ ನಿಮ್ಮಮೇಲೆ ಸದಾ ಇರಲಿ ಎಂದರು. ಸಾಯಂಕಾಲದ ಪ್ರವಚನಕ್ಕಿಂತ ಪೂರ್ವ ಬೆಳಿಗ್ಗೆ ಶ್ರೀಗಳು ಮಠದಿಂದ ಡಾ.ಅಂಬೇಡ್ಕರ್ ನಗರದವರೆಗೆ ಪಾದಯಾತ್ರೆ ನಡೆಸಿ ಪ್ರತಿ ಮನೆಗೂ ಭೇಟಿ ನೀಡಿ ಕುಟುಂಬದ ಸದಸ್ಯರ ಯೋಗ ಕ್ಷೇಮ ವಿಚಾರಿಸಿ ಅವರಿಗೆ ಸತ್ಕರ್ಮ ಪಾಲಿಸಲು ತಿಳಿಸಿದರು. ಪ್ರವಚನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಮಾಜದ ಗಣ್ಯರು ಹಿರಿಯರು ಯುವಕರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ