ಬೆಳಗಾವಿ

ವಿದ್ಯುತ್ ಕಡಿತ ಆದೇಶ ವಿರೋಧಿಸಿ ರೈತರ ದಿಢೀರ್ ಪ್ರತಿಭಟನೆ: ಸಂಚಾರ ಅಸ್ತವ್ಯಸ್ತ

ವಿದ್ಯುತ್ ಕಡಿತ ಆದೇಶ ವಿರೋಧಿಸಿ ರೈತರ ದಿಢೀರ್ ಪ್ರತಿಭಟನೆ: ಸಂಚಾರ ಅಸ್ತವ್ಯಸ್ತ

                    ಸವದತ್ತಿ 25 : ಮಲಪ್ರಭಾ ನದಿ ಪಾತ್ರದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತಗೊಳಿಸುವ ಜಿಲ್ಲಾಡಳಿತದ ಆದೇಶವನ್ನು ವಿರೋಧಿಸಿ, ನೂರಾರು ರೈತರು ಇಲ್ಲಿನ ಹೆಸ್ಕಾಂ ಕಚೇರಿ ಎದುರು ಮುಖ್ಯ ರಸ್ತೆ ತಡೆದು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಹೆಸ್ಕಾಂ ಎಇಇ ಮಹೇಂದ್ರ ವಿಶಾಪೂರಕರ, ಮುಂಬರುವ ಬೇಸಿಗೆಯಲ್ಲಿ ಅಂದರೆ 2027ರ ಜೂನ್ ತಿಂಗಳವರೆಗೆ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗದಂತೆ ಮಲಪ್ರಭಾ ಜಲಾಶಯದ ನೀರನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

                      ನದಿ ಪಾತ್ರದ ಅಕ್ಕಪಕ್ಕದ ಗ್ರಾಮಗಳ ರೈತರು ಪಂಪ್‌ಸೆಟ್‌ಗಳ ಮೂಲಕ ನದಿಯಿಂದ ಜಮೀನುಗಳಿಗೆ ನೀರು ಹಾಯಿಸುವುದನ್ನು ನಿಯಂತ್ರಿಸಲು, ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ಬುಧವಾರ ಮತ್ತು ಭಾನುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ. ಎನ್‌. ಮಠದ ಅವರು ರೈತರಿಂದ ಮನವಿ ಸ್ವೀಕರಿಸಿ, ರೈತರ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ವರದಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಹೆಸ್ಕಾಂ ಅಧಿಕಾರಿಗಳು ರವಿವಾರ 4 ಗಂಟೆಗಳ ಕಾಲ ವಿದ್ಯುತ್ ನೀಡಲು ಮುಂದಾದರಾದರೂ, ಬುಧವಾರ ವಿದ್ಯುತ್ ಕಡಿತದ ದಿನವನ್ನು ಬದಲಾಯಿಸುವಂತೆ ರೈತರು ಪಟ್ಟು ಹಿಡಿದರು.

                        ಜಿಲ್ಲಾಡಳಿತದ ಈ ದಿಢೀರ್ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರೈತರು, ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತಗೊಳಿಸಿದರೆ ಕೈಗೆ ಬಂದಿರುವ ಬೆಳೆಗಳು ಒಣಗಿ ತೀವ್ರ ನಷ್ಟವಾಗಲಿದೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ" ಎಂದು ಆಕ್ರೋಶ ಹೊರಹಾಕಿ, ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಹೆಸ್ಕಾಂ ಕಚೇರಿ ಮುಂಭಾಗದ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡ ಪಂಚನಗೌಡ ದ್ಯಾಮನಗೌಡ್ರ, ನಮ್ಮ ನೀರು ನಮ್ಮ ಹಕ್ಕು. ಬೆಳೆ ಹಾನಿ ಹಾಗೂ ನೀರಿನ ಅಭಾವದಿಂದ ರೈತರು ಕಂಗಾಲಾಗಿದ್ದರೂ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

                         ರೈತರ ಜಮೀನುಗಳಿಗೆ ಸಮರ​‍್ಕವಾಗಿ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರ ರಸ್ತೆ ತಡೆಯಿಂದಾಗಿ ಮಾರ್ಗದ ವಾಹನ ಸಂಚಾರಕ್ಕೆ ಗಂಟೆಗಟ್ಟಲೆ ಅಡಚಣೆ ಉಂಟಾಯಿತು. ಧಾರವಾಡದಿಂದ ಸವದತ್ತಿ ಕಡೆಗೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಣ್ಣ ಮಕ್ಕಳು ಹಾಗೂ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರು ಸಾಲು ಸಾಲಾಗಿ ನಿಂತಿದ್ದ ವಾಹನಗಳ ಮಧ್ಯೆ ಸುಡುಬಿಸಿಲಿನಲ್ಲಿ ನಡೆದುಕೊಂಡು ಹೋಗುವಂತಾಗಿ ತೀವ್ರ ಸುಸ್ತಾದರು.

                    ಅಲ್ಲದೆ, ರೇಣುಕಾ ಯಲ್ಲಮ್ಮದೇವಿಯ ದರ್ಶನಕ್ಕೆ ಧಾರವಾಡ, ಹುಬ್ಬಳ್ಳಿ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಆಗಮಿಸಿದ್ದ ಸಾವಿರಾರು ಭಕ್ತರು ರಸ್ತೆಯಲ್ಲೇ ಸಿಲುಕಿ ತೀವ್ರ ತೊಂದರೆ ಅನುಭವಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಭರಮಪ್ಪ ಅಣಿಗೇರಿ, ಉಮೇಶ್ ಭೀಮನವರ, ಅಲೀಸಾಬ ನೂಲಗಿ, ಮಲ್ಲಿಕಾರ್ಜುನ ಬೀಳಗಿ, ಯಾಸೀನ ಹಲೀಮನವರ, ಉಮೇಶ್ ಪಾಟೀಲ್, ಮಂಜುನಾಥ ನಿಕ್ಕಂ, ಮಂಜುನಾಥ ತುರಮರಿ, ಮಕ್ತುಮ ಹಲೀಮನವರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ