ಸಂವಿಧಾನ ಜ್ಞಾನ ಮತ್ತು ಸುಜ್ಞಾನದ ಕಣಜ: ಸುರೇಶ ರಾಜಮಾನೆ
ಲೋಕದರ್ಶನ ವರದಿ
ಮುಧೋಳ 26 : ತಾಲೂಕಿನ ಮೆಟಗುಡ್ಡ ಗ್ರಾಮದ ಡೋಣಿಯವರ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಸುರೇಶ ರಾಜಮಾನೆ ಮಾತನಾಡಿ, ಸಂವಿಧಾನ ನಮ್ಮ ಬದುಕಿನ ಅಸ್ತಿತ್ವ ಹಾಗೂ ಅಭಿಮಾನದ ಪ್ರತೀಕವಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಿ, ಓದಿ ಅರ್ಥೈಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನಕ್ಕೆ ಸಂಬಂಧಿಸಿದ 100 ಪ್ರಶ್ನೆಗಳನ್ನು ಒಳಗೊಂಡ ‘ಸಂವಿಧಾನ ಸಂ-ಜ್ಞಾನ’ ಎಂಬ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಾದ ಆಯಿಶಾ ಇಂಡಿಗನಾಳ, ಶ್ರೇಯಾ ಡೋಣಿ, ಸಾಯಿಶ್ರೇಯಾ ದಳವಾಯಿ, ರೋಜಾ ಮ್ಯಾಗೇರಿ, ಅರ್ಿತಾ ಇಟ್ಟನ್ನವರ ಹಾಗೂ ನಿರ್ಮಲಾ ಆಗೋಜಿ ಸಂವಿಧಾನದ ಪೀಠಿಕೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.