‘ಕನ್ನಡ ಸೌರಭ’ ಉತ್ಸವದಿಂದ ಕನ್ನಡ ನಾಡು-ನುಡಿಯ ಸಂಭ್ರಮಕ್ಕೆ ಹೊಸ ಮೆರುಗು : ಡಾ. ರಾಹುಲ್ ದೇವರಾಜ
ಲೋಕದರ್ಶನ ವರದಿ
ಬೆಳಗಾವಿ 26 : ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಕಲೆ, ಸಂಪ್ರದಾಯ ಹಾಗೂ ಜನಪದ ವೈಭವವನ್ನು ಪ್ರತಿಬಿಂಬಿಸುವ ಇಂತಹ ಉತ್ಸವಗಳು ಕನ್ನಡಿಗರಲ್ಲಿ ಭಾಷಾಭಿಮಾನ ಮತ್ತು ನಾಡಿನ ಬಗ್ಗೆ ಗೌರವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ. ರಾಹುಲ್ ದೇವರಾಜ ಅವರು ಹೇಳಿದರು. ನಗರದ ಕುಮಾರ ಗಂಧರ್ವ ಹಾಲ್ನಲ್ಲಿ ಬುಧವಾರ ‘ಶ್ರೀ ಮಹಾಲಕ್ಷ್ಮೀ ನಾಡ ಹಬ್ಬ ಸಂಘ’ ಆಯೋಜಿಸಲಾದ ‘ಕನ್ನಡ ಸೌರಭ’ ಸಾಂಸ್ಕೃತಿಕ ಉತ್ಸವ ಅದ್ದೂರಿಯಾಗಿ ಜರುಗಿತು,
ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಯ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ, ಪರಂಪರೆ ಹಾಗೂ ಏಕತೆಯ ಸಂದೇಶವನ್ನು ಸಾರಿದ ಈ ಉತ್ಸವವು ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿವೆ. ನಾಡಿನ ಸಂಸ್ಕೃತಿ ಮತ್ತು ಭಾಷೆಯ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದ್ದು, ಮುಂದಿನ ಪೀಳಿಗೆಗೆ ಕನ್ನಡದ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಕಾರ್ಯಕ್ಕೆ ‘ಕನ್ನಡ ಸೌರಭ’ ಉತ್ಸವ ಪ್ರೇರಣೆಯಾಯಿತು ಎಂದು ಹೇಳಿದರು.
ಮಹಿಳಾ ಮಂಡಳಿಗಳ ಒಗ್ಗಟ್ಟಿನ ಪ್ರಯತ್ನದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಕನ್ನಡ ನಾಡು-ನುಡಿಯ ಗೌರವವನ್ನು ಹೆಚ್ಚಿಸುವುದರೊಂದಿಗೆ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾಡ ಉತ್ಸವ ಸಮಿತಿ ಅಧ್ಯಕ್ಷೆ ವಿದ್ಯಾ ಹುಂಡೇಕರ್ ಅವರ ಮಾತನಾಡಿ, ಕನ್ನಡ ಕೇವಲ ಭಾಷೆ ಅಥವಾ ಅಕ್ಷರಗಳಿಗೆ ಸೀಮಿತವಾಗಿಲ್ಲ. ಅದು ನಮ್ಮ ಬದುಕಿನ ಮೌಲ್ಯ, ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಉತ್ಸವಗಳು ಕನ್ನಡದ ಅಭಿಮಾನವನ್ನು ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಬೆಳಗಾವಿ ನಗರವು ಜಾತಿ, ಧರ್ಮ ಹಾಗೂ ಭಾಷೆಯ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ವಿಶಿಷ್ಟ ನಗರವಾಗಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲಿ ಕಂಡುಬರುವ ಜನಸಂದಣಿ ಹಾಗೂ ಉತ್ಸವದ ಸಂಭ್ರಮ ಬೇರೆಡೆ ಅಪರೂಪ ಎಂದು ಶ್ಲಾಘಿಸಿದರು. ನಗರದ ಸ್ವಚ್ಛತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿ ತಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು. ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಬಿಂಗೆ ನಾಪಫಲಕವನ್ನು ಅನಾವರಣಗೊಳಿಸಿದರು.
ಈ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಸ್ಪರ್ಧೆ, ರಸಪ್ರಶ್ನೆ, ಸಾಂಸ್ಕೃತಿಕ ನೃತ್ಯ ಹಾಗೂ ಕರ್ನಾಟಕದ ವಿಶೇಷತೆಗಳನ್ನು ಸಾರುವ ಭೂಪಟದ ರಂಗೋಲಿ ಸ್ಪರ್ಧೆಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಕನ್ನಡ ಭಾಷೆ, ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾಸಕ ಆಸೀಫ್ ಸೇಠ್ ಹಾಗೂ ಪಾಲಿಕೆ ಸದಸ್ಯ ರಾಜಶೇಖರ ಢೋಣಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
‘ಕನ್ನಡ ಸೌರಭ’ ಉತ್ಸವವು ಮಹಿಳೆಯರ ಸಂಘಟನಾ ಶಕ್ತಿ, ಕನ್ನಡಾಭಿಮಾನ ಹಾಗೂ ಸಾಂಸ್ಕೃತಿಕ ಬದ್ಧತೆಯನ್ನು ಪ್ರತಿಬಿಂಬಿಸುವ ಮೂಲಕ ಬೆಳಗಾವಿಯಲ್ಲಿ ನಾಡು-ನುಡಿಯ ಸಂಭ್ರಮಕ್ಕೆ ಹೊಸ ಮೆರುಗು ನೀಡಿತು. ಈ ಸಂದರ್ಭದಲ್ಲಿ ಸುನೀತಾ ಎಂ. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಡೋಣಿ , ಮಹಾಲಕ್ಷ್ಮೀ ಮಹಿಳಾ ಮಂಡಳದ ಸಲಹಾ ಸಮಿತಿ ಅಧ್ಯಕ್ಷರಾದ ಸುನೀತಾ ಎಂ. ಪಾಟೀಲ, ಶಾರದಾ ಪಾಟೀಲ್ ನಿರೂಪಿಸಿದರು. ವಿದ್ಯಾ ಗೌಡರ ವಂದಿಸಿದರು. 25 ಮಹಿಳಾ ಮಂಡಳಗಳ ಸದಸ್ಯರು ಹಾಗೂ ಸ್ಪರ್ಧಾಳುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.