ದಿಶಾ ಸಮಿತಿ ಸಭೆ; ಎರಡು ಚರಣಗಳ ಬಳಿಕ ನಿಲ್ಲಿಸಿದ್ದ ವಂದೇ ಮಾತರಂಎರಡು ಚರಣಕ್ಕೆ ನಿಲ್ಲದ ಕಾಗೇರಿ
ಕಾರವಾರ 25: ಕಾರವಾರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಬುಧುವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ "ವಂದೇಮಾತರಂ" ಹಾಡನ್ನು ಎರಡು ಚರಣಗಳ ಬಳಿಕ ನಿಲ್ಲಿಸಲಾಯಿತು. ಆದರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ "ವಂದೇ ಮಾತರಂ" ಹಾಡನ್ನು ಮುಂದುವರಿಸಲು ಯತ್ನಿಸಿದರಾದರೂ, ಮೂರನೇ ಚರಣ ಹಾಡುವಾಗ ತಡವರಿಸಿದ ಪ್ರಸಂಗ ನಡೆಯಿತು. ಉ.ಕ. ಜಿಲ್ಲಾ ಪಂಚಾಯತ್ ಸಭಾಗಂಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯ ಸಭೆಯಲ್ಲಿ ಈ ಘಟನೆ ನಡೆಯಿತು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಜಿಲ್ಲಾ ಪಂಚಾಯತ್ ಸಿಇಒ ದೀಲೀಷ್ ಶಶಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ದಿಶಾ ಸಭೆಯ ಆರಂಭದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡಿಸುವಂತೆ ಸಂಸದ ಕಾಗೇರಿ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಚರ್ಚೆಯ ಬಳಿಕವೂ ಸಭೆಯಲ್ಲಿ ವಂದೇ ಮಾತರಂ ಗೀತೆಯ "ಎರಡು ಚರಣ" ಗಳನ್ನು ಮಾತ್ರ ಪ್ಲೇ ಮಾಡಲಾಯಿತು. ಎರಡು ಚರಣಗಳು ಮುಗಿದು ಹಾಡು ನಿಲ್ಲುತ್ತಿದ್ದಂತೆ ಕಾಗೇರಿ ಅವರು ಮುಂದಿನ ಚರಣವನ್ನು ಹಾಡಲು ಮುಂದಾದರು.
ಅವರಿಗೆ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಉಮೇಶ್ ಭಾಗ್ವತ್, ಮುಕುಂದ್ ನಾಯ್ಕ, ಗುರುರಾಜ್ ಶಾನಭಾಗ್ ಧ್ವನಿಗೂಡಿಸಿದರು. ಆದರೆ, ಮೂರನೇ ಚರಣ ಹಾಡುವಾಗ ಸಂಸದರು ಹಾಗೂ ಸದಸ್ಯರು ತಡವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ನಾಡಗೀತೆ ಪ್ಲೇ ಮಾಡುವಂತೆ ಸೂಚಿಸಿದರು. ಪರಿಣಾಮ, ವಂದೇ ಮಾತರಂ ಗೀತೆ ಅರ್ಧಕ್ಕೆ ನಿಂತು ನಾಡಗೀತೆ ಮೊಳಗಿತು. ಸಭೆಯಲ್ಲಿನ ಈ ಪ್ರಸಂಗ ಕುತೂಹಲಕ್ಕೆ ಕಾರಣವಾಯಿತು.