ಜಮಖಂಡಿ

ಹಲ್ಲೆ ಆರೋಪದಲ್ಲಿ ಸತ್ಯಾಂಶವಿಲ್ಲ: ಆನಂದ ನ್ಯಾಮಗೌಡ

ಹಲ್ಲೆ ಆರೋಪದಲ್ಲಿ ಸತ್ಯಾಂಶವಿಲ್ಲ: ಆನಂದ ನ್ಯಾಮಗೌಡ

ಜಮಖಂಡಿ 13 : ಜಮಖಂಡಿ ಶುಗರ್ಸ್‌ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಹಣಕಾಸು ವ್ಯವಸ್ಥಾಪಕ ರಜನೀಷ ವರ್ಮಾ ಅವರ ಮೇಲೆ ಮಾಜಿ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ರೈತರ ಕಬ್ಬಿನ ಬಿಲ್ ಪಾವತಿ ವಿಳಂಬವಾಗಿರುವುದನ್ನು ಪ್ರಶ್ನಿಸಲು ರೈತರು ತೆರಳಿದ ಸಂದರ್ಭದಲ್ಲಿ ರಜನೀಷ ವರ್ಮಾ ಹಾಗೂ ರೈತರ ನಡುವೆ ಗಲಾಟೆ ಆರಂಭವಾಗಿದೆ. ಈ ಘಟನೆಯನ್ನು ಮಾಜಿ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು. 

ಜಮಖಂಡಿ ಶುಗರ್ಸ್‌ ಕಾರ್ಖಾನೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ಕಾರ್ಖಾನೆಗೆ ತೆರಳಿದ ಸಂದರ್ಭದಲ್ಲಿ ರೈತರು ಹಾಗೂ ರಜನೀಷ ವರ್ಮಾ ಅವರ ನಡುವೆ ಗಲಾಟೆ ನಡೆದಿದೆ.ರಜನೀಷ ವರ್ಮಾ ಅವರ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ತಮ್ಮ ಬೆಂಬಲಿಗರ ವಿರುದ್ಧ ಹಲ್ಲೆಯ ಆರೋಪ ಮಾಡಿದ್ದಾರೆ. ರಾಜಕೀಯವಾಗಿ ತಮ್ಮನ್ನು ಸಹಿಸದ ಕೆಲವು ಕಾಣದ ಕೈಗಳು ಈ ಆರೋಪದ ಹಿಂದೆ ಇರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದರು. ಅಲ್ಲದೆ, ರಜನೀಷ ವರ್ಮಾ ಅವರೂ ತಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳುವ ವಿಡಿಯೋ ಮಾಡಿದ್ದಾರೆ ಎಂದು ತಿಳಿಸಿದರು. ರೈತರ ಕಬ್ಬಿನ ಬಿಲ್ ಪಾವತಿ ವಿಚಾರಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಸುದ್ದಿಗಾರರ ಮುಂದೆ ಸ್ಪಷ್ಟನೆ ನೀಡಿದರು. 




ಸುದ್ದಿ ಓದಿ