ಜಮಖಂಡಿ

ಮಹಿಳಾ ಅಧಿಕಾರಿಗಳ ವೇಷದಲ್ಲಿ ಕಾರ್ಯಾಚರಣೆ; ಭ್ರೂಣ ಪತ್ತೆ, ಗರ್ಭಪಾತ ಜಾಲ ಪತ್ತೆ

ಮಹಿಳಾ ಅಧಿಕಾರಿಗಳ ವೇಷದಲ್ಲಿ ಕಾರ್ಯಾಚರಣೆ; ಭ್ರೂಣ ಪತ್ತೆ, ಗರ್ಭಪಾತ ಜಾಲ ಪತ್ತೆ

ಲೋಕದರ್ಶನ ವರದಿ 


ಜಮಖಂಡಿ: ಗರ್ಭಿಣಿಯರ ಮಾರುವೇಷದಲ್ಲಿ ತೆರಳಿ ಹೆಣ್ಣುಭ್ರೂಣ ಪತ್ತೆ ಹಾಗೂ ಗರ್ಭಪಾತದ ಜಾಲ ಭೇದಿಸುವಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ನೇತೃತ್ವದ ತಂಡ ಯಶಸ್ವಿಯಾಗಿದೆ.  

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗರ್ಭಿಣಿಯ ವೇಷದಲ್ಲಿ ಶ್ವೇತಾ ಬೀಡಿಕರ್, ಬೆಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿ ಶೋಭಾ ನಾದಿನಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುವರ್ಣ ಕುಲಕರ್ಣಿ ಅವರು ತಾಯಿ-ಮಗಳ ಪಾತ್ರದಲ್ಲಿ ತೆರಳಿ ಅಕ್ರಮವಾಗಿ ಭ್ರೂಣ ಪತ್ತೆ ಹಾಗೂ ಗರ್ಭಪಾತ ನಡೆಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.  

2024ರಲ್ಲಿ ಮಹಾಲಿಂಗಪುರದ ಕವಿತಾ ಬಾಡನವರ ಎಂಬುವರ ಮೂಲಕ ಚಿಕಿತ್ಸೆ ಪಡೆದ ಮಹಾರಾಷ್ಟ್ರ ಮೂಲದ ಸೋನಾಲಿ ಕದಂ ಎಂಬ ಮಹಿಳೆ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದ ಬಳಿಕ ಅಕ್ರಮ ಸ್ಕ್ಯಾನಿಂಗ್ ಮತ್ತು ಗರ್ಭಪಾತದ ಜಾಲದ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ಈ ಪ್ರಕರಣದಲ್ಲಿ ಕವಿತಾ ಜೈಲು ಸೇರಿದ್ದರೂ, ಹೊರಬಂದ ಬಳಿಕವೂ ತನ್ನ ಚಟುವಟಿಕೆ ಮುಂದುವರಿಸಿದ್ದಳು ಎನ್ನಲಾಗಿದೆ.  

ಈ ಮಾಹಿತಿ ಆಧರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಮಹಾರಾಷ್ಟ್ರಕ್ಕೆ ತೆರಳಿ ಜಾಡರ ಬಬಲಾದಿ ಹಾಗೂ ಕರ್ಜಗಿ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿತು. ಸ್ಥಳೀಯರ ಸಹಕಾರದಿಂದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಲಾಗಿದೆ. ನಕಲಿ ವೈದ್ಯ ಸಂಜಯ ವಾಗ್ಮೋರೆ (ಪಾಟೀಲ) ಪರಾರಿಯಾಗಿದ್ದಾನೆ.  


ಸುದ್ದಿ ಓದಿ