ರಾಜ್ಯದಲ್ಲಿ ಭೀಕರ ಬರ: ರೈತರ ನೆರವಿಗೆ ಸರ್ಕಾರ ಬದ್ಧ- ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ಲೋಕದರ್ಶನ ವರದಿ
ಬಳ್ಳಾರಿ 07: ಕರ್ನಾಟಕದಲ್ಲಿ ಕಳೆದ 75 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ ಎದುರಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆದ ಡಾ.ಜಿ. ಪರಮೇಶ್ವರ ಅವರು ಹೇಳಿದರು.
ಬುಧವಾರ, ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಮಳೆ ಕೊರತೆಯಿಂದ ಹೊಲದಲ್ಲಿ ಒಣಗುತ್ತಿರುವ ತೊಗರಿ ಬೆಳೆಗಳನ್ನು ಖುದ್ದು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
*ಬರಪೀಡಿತ ತಾಲೂಕುಗಳ ಘೋಷಣೆ:*
ಕರಾವಳಿ ತೀರದ 10ಹಿ15 ತಾಲೂಕುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಭಾಗಗಳಲ್ಲಿ ಭೀಕರ ಬರ ಆವರಿಸಿದೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಉಳಿದ 23 ತಾಲೂಕುಗಳಲ್ಲಿ ಕ್ಷೇತ್ರಗಳ ವಾಸ್ತವಿಕ ಪರೀಶೀಲನೆ ನಡೆಯುತ್ತಿದ್ದು, ಅವುಗಳಲ್ಲಿಯೂ 10 ರಿಂದ 15 ತಾಲೂಕುಗಳನ್ನು ಶೀಘ್ರವೇ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ರಾಜ್ಯದಲ್ಲಿ ಶೇಕಡಾ 90 ರಷ್ಟು ಬೆಳೆ ಹಾನಿಯಾಗಿದೆ. ರೈತರು ಬೆಳೆದ ತೊಗರಿ, ಜೋಳ ಸಂಪೂರ್ಣ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ತಿಳಿಸಿದರು.