ಮೋದಿ ಆಡಳಿತಕ್ಕೆ 25 ವರ್ಷ: ಅವರು ಜಗತ್ತಿನ ನಾಯಕ - ಜಗದೀಶ್ ಶೆಟ್ಟರ್
ರ್ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಜಿಯವರು ಕೇವಲ ದೇಶದ ಪ್ರಧಾನಿಯಲ್ಲ, ಜಗತ್ತಿನ ನಾಯಕರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಣ್ಣಿಸಿದ್ದಾರೆ.
ನಗರದಲ್ಲಿ 'ಸೇವಾ ಜ್ಯೋತಿ ಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿಜಿಯವರು 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ, 12 ವರ್ಷ ದೇಶದ ಪ್ರಧಾನಿಯಾಗಿ ಒಟ್ಟು 25 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ ಎಂದರು.
ಸೆ.17ರಂದು ಮೋದಿಜಿಯವರ ಹುಟ್ಟುಹಬ್ಬದಿಂದ ಒಂದು ತಿಂಗಳ ಕಾಲ ದೇಶಾದ್ಯಂತ 'ಸಂಕಲ್ಪ ಸೇವಾ ಯಾತ್ರೆ' ನಡೆಯುತ್ತಿದೆ. ಪ್ರತಿ ತಾಲೂಕು, ನಗರದಲ್ಲಿ ಜ್ಯೋತಿ ಯಾತ್ರೆ ಮೂಲಕ ಅವರ ಸೇವಾ ಭಾವನೆಯನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಇಂದು ಬೆಳಿಗ್ಗೆ ದೆಹಲಿಯಿಂದ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಕಸಿತ ಭಾರತ 2047 ಸಾಧನೆಗೆ 'ವೀ ವಿಲ್ ಡು ಇಟ್' ಎಂಬ ಕರೆ ನೀಡಿದ್ದಾರೆ. ಇದು ದೇಶದ ಜನರಿಗೆ ಸ್ಪೂರ್ತಿಯ ಚಿಲುಮೆಯಾಗಿದೆ ಎಂದು ಶೆಟ್ಟರ್ ಹೇಳಿದರು.
ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಆರ್ಥಿಕತೆಯಲ್ಲಿ 10-12ನೇ ಸ್ಥಾನದಲ್ಲಿತ್ತು, ಈಗ 4ನೇ ಸ್ಥಾನಕ್ಕೆ ಬಂದಿದೆ. ಒಂದೆರಡು ವರ್ಷದಲ್ಲಿ 3ನೇ ಸ್ಥಾನಕ್ಕೆ ಬರಲಿದೆ. 2047ರ ವೇಳೆಗೆ ಜಗತ್ತಿನಲ್ಲಿ ನಂಬರ್ 1 ಸ್ಥಾನಕ್ಕೆ ಬರುವ ಗುರಿ ಹೊಂದಿದ್ದೇವೆ. ಇದಕ್ಕೆ ಮೋದಿಜಿಯವರ ಆಡಳಿತವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಮೋದಿಜಿಯವರು 24x7 ಕೆಲಸ ಮಾಡುವ ವ್ಯಕ್ತಿ, ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.