ಶಿವಯೋಗ-ಮೌನ ಅನುಷ್ಠಾನದಿಂದ ಆತ್ಮಶಕ್ತಿ ವೃದ್ಧಿ: ಶ್ರೀಗಳ ಅಭಿಮತ
ಯಮಕನಮರಡಿ 07: ಸ್ಥಳೀಯ ಜಗದ್ಗುರು ಶೂನ್ಯ ಸಂಪಾದನಾ ಪೀಠ, ಹುಣಸಿಕೊಳ್ಳಮಠದಲ್ಲಿ 11 ದಿನಗಳ ಶಿವಯೋಗ ಹಾಗೂ ಮೌನ ಅನುಷ್ಠಾನದ ಮಂಗಲ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.ವಿಶ್ವಗುರು ಬಸವಣ್ಣ ಹಾಗೂ ಲಿಂಗೈಕ್ಯ ಗುರುಸಿದ್ಧ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಚೋಟೇಶ್ವರ ಮಹಾಸ್ವಾಮಿಗಳು ಮಾತನಾಡಿ, ಶಿವಯೋಗ ಹಾಗೂ ಮೌನ ಅನುಷ್ಠಾನ ಅನುಭಾವದ ಜಾತ್ರೆ ಇದ್ದಂತೆ. ಬಸವಾದಿ ಶರಣರ ತತ್ವ ಅರಿಯಲು ಸಾಧ್ಯ. ಸಿದ್ಧಬಸವ ದೇವರು 11 ದಿನ ಮೌನ ಅನುಷ್ಠಾನ ಕೈಗೊಂಡಿರುವುದು ಸಂತಸದ ಸಂಗತಿ ಎಂದರು. ಘೂಡಗೇರಿಯ ಕಾಶಿನಾಥ ಮಹಾಸ್ವಾಮಿಗಳು ಹಾಗೂ ಖಡಕಲಾಟದ ಶಿವಬಸವ ಮಹಾಸ್ವಾಮಿಗಳು ಮೌನ ಸಾಧನೆಯ ಮಹತ್ವ ವಿವರಿಸಿದರು. ಮಿಥುನ್ ಅಂಕಲಗಿ ಮಾತನಾಡಿ, ಮೌನದಲ್ಲಿ ಅದ್ಭುತ ಶಕ್ತಿ ಇದೆ. ಹುಣಸಿಕೊಳ್ಳಮಠ ಶಿಲ್ಪಕಲೆಯ ತೊಟ್ಟಿಲು ಎಂದರು. ಪ್ರೇಮಕ್ಕ ಅಂಗಡಿ ಅವರು ಅನುಭಾವದ ನುಡಿಗಳನ್ನಾಡಿದರು. ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತಾದಿಗಳು, ಅಕ್ಕನ ಬಳಗದ ಸದಸ್ಯರು ಇದ್ದರು. ವೀರೇಶ ಪಾಟೀಲ ನಿರೂಪಿಸಿದರು.