ದೇಶಾದ್ಯಂತ 50 ಹೊಸ ಆಶ್ರಯ ಕೇಂದ್ರ ಸ್ಥಾಪಿಸಲಿರುವ ಅಮೆಜಾನ್; ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್‌ಗಳಿಗೆ ಚಾಲನೆ
ಬೆಂಗಳೂರು, ಅ. 7 : ಹಬ್ಬದ ಋತುವಿನಲ್ಲಿ ವಿತರಣಾ ಸೇವೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ವಿತರಣಾ ಚಾಲಕರಿಗೆ ಮಾರ್ಗಮಧ್ಯೆ ವಿಶ್ರಾಂತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಅಮೆಜಾನ್ ಇಂಡಿಯಾ ದೇಶಾದ್ಯಂತ 50 ಹೊಸ ‘ಆಶ್ರಯ’ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬುಧವಾರ ಘೋಷಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಎರಡು ಮೊಬೈಲ್ ಆಶ್ರಯ ವ್ಯಾನ್‌ಗಳಿಗೆ ಚಾಲನೆ ನೀಡಲಾಗಿದೆ.
ಹೊಸ 50 ಕೇಂದ್ರಗಳ ಸ್ಥಾಪನೆಯೊಂದಿಗೆ ದೇಶಾದ್ಯಂತ ಅಮೆಜಾನ್‌ನ ಆಶ್ರಯ ಕೇಂದ್ರಗಳ ಸಂಖ್ಯೆ 200ಕ್ಕೆ ಏರಿಕೆಯಾಗಲಿದೆ. 2026ರ ಅಂತ್ಯದ ವೇಳೆಗೆ ಒಟ್ಟು 250 ಆಶ್ರಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಕಂಪನಿ ಹೊಂದಿದೆ. ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ಕೇಂದ್ರಗಳು ಆರಂಭಗೊಳ್ಳಲಿವೆ.
ಬೆಂಗಳೂರಿನಲ್ಲಿ ಆರಂಭಿಸಲಾದ ಎರಡು ಮೊಬೈಲ್ ಆಶ್ರಯ ವ್ಯಾನ್‌ಗಳೊಂದಿಗೆ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಹೈದರಾಬಾದ್ ನಂತರ ಈ ಸೌಲಭ್ಯ ಹೊಂದಿದ ನಾಲ್ಕನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಹೆಚ್ಚಿನ ಸಂಚಾರವಿರುವ ವಿತರಣಾ ಮಾರ್ಗಗಳಲ್ಲಿ ಈ ವ್ಯಾನ್‌ಗಳು ಸಂಚರಿಸಲಿದ್ದು, ಚಾಲಕರಿಗೆ ಹವಾನಿಯಂತ್ರಿತ ಆಸನ, ಕುಡಿಯುವ ನೀರು, ಉಚಿತ ವೈ-ಫೈ ಮತ್ತು ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲಿವೆ.
ಅಮೆಜಾನ್‌ನ ಉದ್ಯೋಗಿ ಅನುಭವ ಮತ್ತು ಸಂಬಂಧಗಳ ಉಪಾಧ್ಯಕ್ಷೆ ಸ್ಯಾಂಡಿ ಗಾರ್ಡನ್ ಹಾಗೂ ಉತ್ತರ ಅಮೆರಿಕ ಉದ್ಯೋಗಿ ಸಂಬಂಧಗಳ ಉಪಾಧ್ಯಕ್ಷ ಬ್ರೆಂಡನ್ ಬ್ರಾನನ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮೊಬೈಲ್ ಆಶ್ರಯ ವ್ಯಾನ್‌ಗಳಿಗೆ ಚಾಲನೆ ನೀಡಲಾಯಿತು.
“ಹಬ್ಬದ ಋತುವಿನಲ್ಲಿ ವಿತರಣಾ ಸೇವೆಗಳು ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಚಾಲಕರು ತಮ್ಮ ಮಾರ್ಗಗಳಲ್ಲಿ ವಿಶ್ರಾಂತಿ ಪಡೆಯಲು ಸೂಕ್ತ ಸೌಲಭ್ಯ ಹೊಂದಿರುವುದು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ,” ಎಂದು ಅಮೆಜಾನ್ ಇಂಡಿಯಾದ ಕಾರ್ಯಾಚರಣೆಗಳ ನಿರ್ದೇಶಕ ಸಲೀಂ ಆರ್. ಮೆಮನ್ ಹೇಳಿದರು.
ಚಾಲಕರು ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ಕೆಲಸದ ಅವಧಿಯಲ್ಲಿ ಸ್ವಚ್ಛ ಮತ್ತು ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಆಶ್ರಯ’ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
2026ರಲ್ಲಿ ಅಮೆಜಾನ್ ಇಂಡಿಯಾ ತನ್ನ ಕಾರ್ಯಾಚರಣೆ ಜಾಲದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಕ್ಷೇಮವನ್ನು ಬಲಪಡಿಸಲು ರೂ. 2,800 ಕೋಟಿಗೂ ಹೆಚ್ಚು ಹೂಡಿಕೆ ಮಾಡುತ್ತಿರುವುದರ ಭಾಗವಾಗಿಯೇ ಈ ವಿಸ್ತರಣೆ ಕೈಗೊಳ್ಳಲಾಗಿದೆ ಎಂದು ಮೆಮನ್ ತಿಳಿಸಿದರು.
2024ರಲ್ಲಿ ಆರಂಭಗೊಂಡ ಆಶ್ರಯ ಕೇಂದ್ರಗಳಲ್ಲಿ ಹವಾನಿಯಂತ್ರಿತ ಆಸನಗಳು, ಕುಡಿಯುವ ನೀರು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಸ್ವಚ್ಛ ಶೌಚಾಲಯಗಳು, ಪ್ರಥಮ ಚಿಕಿತ್ಸಾ ಕಿಟ್‌ಗಳು ಹಾಗೂ ವಿಶ್ರಾಂತಿ ಸ್ಥಳಗಳ ಸೌಲಭ್ಯವಿದೆ. ಪ್ರತಿ ಕೇಂದ್ರದಲ್ಲಿ ಒಂದೇ ಸಮಯದಲ್ಲಿ 10ರಿಂದ 15 ಮಂದಿ ವಿಶ್ರಾಂತಿ ಪಡೆಯಬಹುದಾಗಿದ್ದು, ಪ್ರತಿ ಭೇಟಿಗೆ ಗರಿಷ್ಠ 30 ನಿಮಿಷಗಳವರೆಗೆ ಉಚಿತವಾಗಿ ಬಳಸಿಕೊಳ್ಳಬಹುದು.
ಈ ಕೇಂದ್ರಗಳು ವರ್ಷಪೂರ್ತಿ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲಿದ್ದು, ಪೆಟ್ರೋಲ್ ಬಂಕ್‌ಗಳು ಮತ್ತು ವಾಣಿಜ್ಯ ಪ್ರದೇಶಗಳಂತಹ ಹೆಚ್ಚಿನ ಜನಸಂಚಾರವಿರುವ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ವಿತರಣಾ ಚಾಲಕರಿಗಾಗಿ ಪಾರ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.
ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ಇತರ ಕಂಪನಿಗಳಲ್ಲಿ ಕೆಲಸ ಮಾಡುವ ಚಾಲಕರೂ ಸೇರಿದಂತೆ ಎಲ್ಲ ವಿತರಣಾ ಚಾಲಕರಿಗೂ ಆಶ್ರಯ ಕೇಂದ್ರಗಳನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಅಮೆಜಾನ್ ತಿಳಿಸಿದೆ.
2024ರಲ್ಲಿ ದೆಹಲಿ-ಎನ್‌ಸಿಆರ್, ಬೆಂಗಳೂರು ಮತ್ತು ಮುಂಬೈನಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಈ ಯೋಜನೆ, 2025ರಲ್ಲಿ 16 ನಗರಗಳಲ್ಲಿ 100 ಕೇಂದ್ರಗಳಿಗೆ ವಿಸ್ತರಿಸಿತ್ತು. 2026ರ ಮೇ ವೇಳೆಗೆ ಕೇಂದ್ರಗಳ ಸಂಖ್ಯೆ 150ಕ್ಕೆ ತಲುಪಿತ್ತು.
ಇದೀಗ ಆಶ್ರಯ ಕೇಂದ್ರಗಳ ಜಾಲವನ್ನು 200ಕ್ಕೆ ವಿಸ್ತರಿಸಲಾಗುತ್ತಿದ್ದು, 2026ರ ಅಂತ್ಯದ ವೇಳೆಗೆ ದೇಶಾದ್ಯಂತ 250 ಕೇಂದ್ರಗಳ ಗುರಿ ತಲುಪುವ ನಿರೀಕ್ಷೆಯಿದೆ ಎಂದು ಅಮೆಜಾನ್ ಹೇಳಿದೆ.