ಸಿದ್ಧಾರೂಢ ಭಕ್ತರಿಂದ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ
ತಾಳಿಕೋಟೆ, 7: ಬೀದರ್ ಜಿಲ್ಲೆಯ ಚಳಕಾಪುರದತ್ತ ತೆರಳುತ್ತಿದ್ದ ಹಿರೇಕೆರೂರಿನ ಸಿದ್ಧಾರೂಢರ ಭಕ್ತರು ಮಾರ್ಗಮಧ್ಯೆ ತಾಳಿಕೋಟೆಗೆ ಆಗಮಿಸಿ, ಇಲ್ಲಿನ ಪ್ರಸಿದ್ಧ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದರು.
ಚಳಕಾಪುರದ ಯಾತ್ರೆಗೆ ತೆರಳುತ್ತಿದ್ದ ಭಕ್ತರು ದಾರಿಯಲ್ಲಿ ‘ಶ್ರೀ ಗುರು ಖಾಸ್ಗತೇಶ್ವರರ’ ಗ್ರಂಥವನ್ನು ವೀಕ್ಷಿಸುತ್ತಾ ಸಾಗುತ್ತಿದ್ದ ವೇಳೆ ತಾಳಿಕೋಟೆ ಎಂಬ ಫಲಕ ಕಂಡು ಕುತೂಹಲ ಹಾಗೂ ಭಕ್ತಿಯಿಂದ ಮಠಕ್ಕೆ ಆಗಮಿಸಿದರು. ಎರಡು ದೊಡ್ಡ ಬಸ್ಗಳಲ್ಲಿ ಸುಮಾರು 100ರಿಂದ 120ಕ್ಕೂ ಅಧಿಕ ಭಕ್ತರು ಆಗಮಿಸಿ ಮಠದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಿಸಿದರು.
ಮಠಕ್ಕೆ ಆಗಮಿಸಿದ ಭಕ್ತರನ್ನು ಪರಂಪರೆಯಂತೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಶ್ರೀಮಠದಲ್ಲಿ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತು. ದರ್ಶನ ಪಡೆದ ಎಲ್ಲ ಭಕ್ತರಿಗೆ ಫಲಪ್ರಸಾದ ವಿತರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವೇ.ಮ.ವಿಶ್ವನಾಥ ವಿರಕ್ತಮಠ, ವೇ.ಮ. ಮುರುಗೇಶ ವೀರಕ್ತಮಠ, ಆನಂದ ಕುಲಕರ್ಣಿ, ಜಿ.ಟಿ. ಗೋಪರ್ಡೆ, ಅಮೋಘ ಕುಲಕರ್ಣಿ, ಕಾಶಿನಾಥ ಕೆರಟಗಿ, ಚಂದ್ರಶೇಖರ ಟುಬಕೆ, ಕಾಶಿನಾಥ ವಿಭೂತಿ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.