ದುಶ್ಚಟಗಳಿಂದ ದೂರವಿದ್ದು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ: ಲಕ್ಷ್ಮಣ ಶರಣರು
ಲೋಕದರ್ಶನ ವರದಿ
ಬೀಳಗಿ 24: ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯ ಜೀವನಮೌಲ್ಯ, ಆದರ್ಶ ಹಾಗೂ ಧರ್ಮದ ಮಾರ್ಗವನ್ನು ತೋರಿಸುವ ದಾರೀದೀಪವಾಗಿದೆ. ಹಿರಿಯರು ಹಾಕಿಕೊಟ್ಟ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪೋಷಕರ ಮೇಲಿದೆ. ತಂದೆ-ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರ ಜತೆಗೆ ಅವರ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸಬೇಕು ಎಂದು ಸುರಗಿರಿ ಬೆಟ್ಟದ ಭುವನೇಶ್ವರಿ ದೇವಾಲಯದ ಧರ್ಮಾಧಿಕಾರಿ ಲಕ್ಷ್ಮಣ ಶರಣರು ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮಾಜದ ಗುರುಹಿರಿಯರು, ನೌಕರರು ಹಾಗೂ ಯುವ ಮಿತ್ರರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದವರಿಗೆ ಯಶಸ್ಸು ಖಚಿತವಾಗಿ ಒಲಿಯುತ್ತದೆ.
ಯುವಕರು ವ್ಯಸನಗಳ ದಾಸರಾಗದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಎಲ್ಲ ರೀತಿಯ ದುಶ್ಚಟಗಳಿಂದ ದೂರವಿದ್ದು, ತಂದೆ-ತಾಯಿಯ ದುಡಿಮೆಯ ಹಣವನ್ನು ಮೋಜು-ಮಸ್ತಿಗೆ ವ್ಯಯಿಸುವ ಬದಲು ಸ್ವತಃ ದುಡಿದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ಶಿಸ್ತು, ಸಂಯಮ ಮತ್ತು ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದರು.