ಬೆಳಗಾವಿ

ಜನಗಣತಿ-2027ರ ಎರಡನೇ ಹಂತದ ಜನಸಂಖ್ಯಾ ಗಣತಿ ಕಾರ್ಯ ಕ್ಷೇತ್ರ ತರಬೇತುದಾರರ ತರಬೇತಿ ಕಾರ್ಯಕ್ರಮ

ಜನಗಣತಿ-2027ರ ಎರಡನೇ ಹಂತದ ಜನಸಂಖ್ಯಾ ಗಣತಿ ಕಾರ್ಯ  ಕ್ಷೇತ್ರ ತರಬೇತುದಾರರ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ 

           ಬೆಳಗಾವಿ 24; ಭಾರತದಲ್ಲಿ ಬ್ರಿಟಿಷರ ಕಾಲದಿಂದಲೂ ಜನಗಣತಿ ಕಾರ್ಯ ನಡೆಯುತ್ತಿದ್ದು, 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್‌-19 ಮಹಾಮಾರಿ ಹಾಗೂ ಇತರೆ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಪ್ರಸ್ತುತ ನಡೆಯುತ್ತಿರುವ ಜನಗಣತಿ-2027 ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

          ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯ ಅಂಕಿ-ಅಂಶಗಳು ಪ್ರಮುಖ ಆಧಾರವಾಗಲಿವೆ ಎಂದು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಅವರು ತಿಳಿಸಿದರು. 

              ನಗರದ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಸೋಮವಾರ(ನ.23) ಜರುಗಿದ ಜನಗಣತಿ-2027ರ ಎರಡನೇ ಹಂತವಾದ ಜನಸಂಖ್ಯಾ ಗಣತಿ ಕಾರ್ಯದ ಯಶಸ್ವಿ ಅನುಷ್ಠಾನಕ್ಕಾಗಿ ಬೆಳಗಾವಿ ಜಿಲ್ಲೆಯ ನೇಮಕಗೊಂಡಿರುವ 156 ಕ್ಷೇತ್ರ ತರಬೇತುದಾರರಿಗೆ ಆಯೋಜಿಸಲಾಗಿರುವ ತಾಲ್ಲೂಕುವಾರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

              ಜನಗಣತಿ-2027ರ ವಿಶೇಷತೆಯು ಇದೇ ಮೊದಲ ಬಾರಿಗೆ ವೆಬ್ ಮತ್ತು ಮೊಬೈಲ್ ಆಪ್ ಆಧಾರಿತ ಡಿಜಿಟಲ್ ವ್ಯವಸ್ಥೆಯ ಮೂಲಕ ಜನಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೊದಲನೇ ಹಂತದ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯ ಪೂರ್ಣಗೊಂಡಿದ್ದು,

            ಎರಡನೇ ಹಂತದ ಜನಸಂಖ್ಯಾ ಗಣತಿಯಲ್ಲಿ ಪ್ರತಿಯೊಂದು ಕುಟುಂಬದ ಸದಸ್ಯರ  ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಎರಡೂ ಹಂತಗಳಲ್ಲಿ ಸಾರ್ವಜನಿಕರಿಗೆ ಸ್ವಯಂ ಗಣತಿ ಮೂಲಕ ತಮ್ಮ ಮಾಹಿತಿಯನ್ನು ನೇರವಾಗಿ ದಾಖಲಿಸಲು ಅವಕಾಶ ಕಲ್ಪಿಸಿರುವುದು ಈ ಜನಗಣತಿಯ ಮತ್ತೊಂದು ವಿಶೇಷತೆಯಾಗಿದೆ ಎಂದು ಹೇಳಿದರು. 

              ಕ್ಷೇತ್ರ ತರಬೇತುದಾರರು ಶಿಕ್ಷಕ ವೃತ್ತಿಯ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ತಾವು ಪಡೆಯುವ ತರಬೇತಿಯನ್ನು ಸಮರ​‍್ಕವಾಗಿ ಬಳಸಿಕೊಂಡು ಮುಂದಿನ ಹಂತದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಗುಣಮಟ್ಟದ ತರಬೇತಿ ನೀಡಬೇಕು. ಜನಗಣತಿ ಕಾರ್ಯವನ್ನು ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ವಚನದ ಆಶಯದಂತೆ ಪವಿತ್ರ ಕರ್ತವ್ಯ ಮತ್ತು ಜವಾಬ್ದಾರಿಯೆಂದು ಪರಿಗಣಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.                            ತರಬೇತಿ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಅಥವಾ ಇತರೆ ಆಡಳಿತಾತ್ಮಕ ತೊಂದರೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ತರಬೇತುದಾರರಿಗೆ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣಾ ಕಿಟ್‌ಗಳನ್ನು ವಿತರಿಸಲಾಯಿತು. ಬೆಳಗಾವಿ ಜಿಲ್ಲೆಯ 156 ಕ್ಷೇತ್ರ ತರಬೇತುದಾರರಿಗೆ ಒಟ್ಟು ನಾಲ್ಕು ಬ್ಯಾಚ್‌ಗಳಲ್ಲಿ ತರಬೇತಿ ಆಯೋಜಿಸಲಾಗಿದ್ದು, ಮೊದಲ ಮತ್ತು ಎರಡನೇ ಬ್ಯಾಚ್‌ಗಳಿಗೆ ನವೆಂಬರ್ 23ರಿಂದ 25ರವರೆಗೆ ಹಾಗೂ ಮೂರನೇ ಮತ್ತು ನಾಲ್ಕನೇ ಬ್ಯಾಚ್‌ಗಳಿಗೆ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ತರಬೇತಿ ನಡೆಯಲಿದೆ.  

                  ಜನಗಣತಿ-2027ರ ಎರಡನೇ ಹಂತದ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರ ತರಬೇತುದಾರರು ಜವಾಬ್ದಾರಿಯಿಂದ ತರಬೇತಿ ಪಡೆದು, ಮುಂದಿನ ಹಂತದ ಗಣತಿದಾರರು ಮತ್ತು ಮೇಲ್ವಿಚಾರಕರ ತರಬೇತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ. 


ಸುದ್ದಿ ಓದಿ