ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬು ಬೆಳೆ ಭಸ್ಮ
ಇಂಡಿ 07: ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಸುಮಾರು ಒಂದು ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾದ ಘಟನೆ ತಾಲೂಕಿನ ತಡವಲಗಾ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಸರ್ವೆ ನಂಬರ್ 324/2 ಹಾಗೂ 324/3ಕ್ಕೆ ಸೇರಿದ ಅನ್ವರಸಾಬ್ ಹುಸೇನಸಾಬ್ ಕಲಾವಂತ ಹಾಗೂ ಅಬ್ಬಾಸಲಿ ಹುಸೇನಸಾಬ್ ಕಲಾವಂತ ಅವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಾಲಸೋಲ ಮಾಡಿ, ಹಗಲು-ರಾತ್ರಿ ಎನ್ನದೆ ನೀರುಣಿಸಿ, ಗೊಬ್ಬರ ಹಾಕಿ ಆರೈಕೆ ಮಾಡಿದ್ದ ಕಬ್ಬು ಬೆಳೆ ಕಟಾವಿಗೆ ಬರುವ ಹಂತದಲ್ಲಿತ್ತು. ಆದರೆ, ವಿದ್ಯುತ್ ತಂತಿಯಲ್ಲಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಸುಮಾರು ಒಂದು ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳಕ್ಕೆ ಧಾವಿಸಿದ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಶಿವಾನಂದ ಪೂಜಾರಿ, ಮನೋಹರ ಪಾಟೀಲ, ಸಂತೋಷ ಪೂಜಾರಿ, ಮೋಹನ ನಾಯಿಕ ಹಾಗೂ ಬಸವರಾಜ ನಾವಿ ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ತಿಳಿದು ತಡವಲಗಾ ಗ್ರಾಮದ ಆಡಳಿತಾಧಿಕಾರಿ ಮಹಾತೇಶ ಗುರುಬಟ್ಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ತಡವಲಗಾ ಕೆಪಿಟಿಸಿಎಲ್ ಶಾಖಾಧಿಕಾರಿ ಜಿ.ಡಿ. ಬಾಬನಗರ್ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.