ಇಂಡಿ

ಕಚೇರಿಯಲ್ಲಿ ಅಧಿಕಾರಿಯ ಕರ್ತವ್ಯಲೋಪ: ಸಾರ್ವಜನಿಕರ ಆಕ್ರೋಶ

ಕಚೇರಿಯಲ್ಲಿ ಅಧಿಕಾರಿಯ ಕರ್ತವ್ಯಲೋಪ: ಸಾರ್ವಜನಿಕರ ಆಕ್ರೋಶ


ಇಂಡಿ 5: ಸರ್ಕಾರಿ ಹಾಗೂ ಅರೆಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದು ಸಾರ್ವಜನಿಕ ಸೇವೆಯ ಕನಿಷ್ಠ ಕರ್ತವ್ಯವಾಗಿದೆ. ಆದರೆ ಭವಿಷ್ಯದಲ್ಲಿ ಪ್ರತ್ಯೇಕ ಜಿಲ್ಲಾ ಕೇಂದ್ರವಾಗಲು ಸಜ್ಜಾಗುತ್ತಿರುವ ಇಂಡಿ ಪಟ್ಟಣದ ಪ್ರಮುಖ ಕಚೇರಿಗಳಲ್ಲೇ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  

ಇಂಡಿಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರಿ​‍್ಡಎಲ್) ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಆನಂದ್ ಅವರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದೆ ನಿರಂತರವಾಗಿ ಗೈರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕಚೇರಿ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಕಚೇರಿ ಬಾಗಿಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.  

ಅಧಿಕಾರಿಯ ಗೈರುಹಾಜರಿಯಿಂದ ತಾಲ್ಲೂಕಿನಲ್ಲಿ ನಡೆಯಬೇಕಿರುವ ಪ್ರಮುಖ ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳ ಪರೀಶೀಲನೆ, ಕಡತಗಳ ವಿಲೇವಾರಿ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  

ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಶಿಸ್ತು ಅತ್ಯಂತ ಅಗತ್ಯವಾಗಿದ್ದು, ಇಂತಹ ಬೇಜವಾಬ್ದಾರಿ ನಡೆ ಆಡಳಿತ ಯಂತ್ರದ ವಿಳಂಬ ಧೋರಣೆಗೆ ಸಾಕ್ಷಿಯಾಗಿದೆ. ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದೆ ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆ ತರುತ್ತಿರುವ ಸಂಬಂಧಪಟ್ಟ ಎಇಇ ವಿರುದ್ಧ ಮೇಲಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ