10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಜಮಖಂಡಿ 06 : ನಗರದ ಬಸವ ಭವನದಲ್ಲಿ ಭಾನುವಾರ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಹಾಗೂ ಜಮಖಂಡಿ ತಾಲೂಕು ಘಟಕಗಳ ಸಹಯೋಗದಲ್ಲಿ ನಡೆದ ಸಮ್ಮೇಳನದ ಕಾರ್ಯಕ್ರಮದ ವೇಳೆ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಿಳಿ ಕಾಗದದ ಹಾಳೆಯನ್ನು ಹಿಡಿದುಕೊಂಡ ಪ್ರತಿಭಟನಾಕಾರರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂತೋಷ ತಳಕೇರಿ ಅವರ ಸಾಧನೆಗಳು, ಅವರು ಬರೆದಿರುವ ಸಾಹಿತ್ಯ ಕೃತಿಗಳು ಹಾಗೂ ಅವರಿಗೆ ದೊರೆತಿರುವ ಸನ್ಮಾನಗಳ ಕುರಿತು. ಬಿಳಿ ಕಾಗದದ ಹಾಳೆಯನ್ನು ಹಿಡಿದುಕೊಂಡ ಸಾರ್ವಜನಿಕರ ಗಮನ ಸೆಳೆದರು.
ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಅವರು ಕನ್ನಡ ಸಾಹಿತ್ಯದ ಬಗ್ಗೆ ಅರಿವಿಲ್ಲದವರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸೂಕ್ತ ಗೌರವ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.