ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊಳಗಿದ ಕನ್ನಡಾಭಿಮಾನದ ಧ್ವನಿ
ಲೋಕದರ್ಶನ ವರದಿ
ಜಮಖಂಡಿ 06 : ಇಂದಿನ ದಿನಗಳಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಷಾದನೀಯ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ಮಹನೀಯರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದ್ದರಿಂದ ಇಂಗ್ಲಿಷ್ ದೊಡ್ಡದು ಎಂಬ ಮನೋಭಾವವನ್ನು ತೊರೆದು ಕನ್ನಡವೇ ಶ್ರೇಷ್ಠ ಎಂಬ ಹೆಮ್ಮೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಇರಬೇಕು ಎಂದು ಸಮೇಳನದ ಸಾಹಿತಿ ಡಾ. ಮನು ಬಳಗಾರ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಮಖಂಡಿ ಕಲೆ, ಶಿಕ್ಷಣ ಹಾಗೂ ಕ್ರೀಡೆಯ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಭೂಮಿಯಾಗಿದೆ. ಕುಸ್ತಿ, ಕಬ್ಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತಾವು ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಶಾಲಾ-ಕಾಲೇಜುಗಳ ಶಿಕ್ಷಣದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ಕನ್ನಡದ ಬಗ್ಗೆ ಯುವ ಪೀಳಿಗೆಯಲ್ಲಿ ಅಭಿಮಾನ ಬೆಳೆಸಬೇಕು. ಸಮಾನತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧದ ಸಂದೇಶಗಳನ್ನು ವಚನಕಾರರು ಬಹಳ ಹಿಂದೆಯೇ ಸಾರಿದ್ದಾರೆ ಎಂದರು.
ರುದ್ರಸ್ವಾಮಿ ಮಠದ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು ಹಾಗೂ ಅಥಣಿ ಪ್ರಭುಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಸರ್ಕಾರ ತಿರಸ್ಕಾರ ಮನೋಭಾವ ತೋರಬಾರದು. ಪ್ರತಿಯೊಬ್ಬರೂ ಕನ್ನಡದಲ್ಲಿಯೇ ಸಹಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಸಮ್ಮೇಳನದ ಅಂಗವಾಗಿ ‘ದಶದೀಪ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಂಗಮೇಶ ಮಟ್ಟೋಳಿ, ಜಿ.ಎಸ್. ನ್ಯಾಮಗೌಡ, ಡಾ. ಎಚ್.ಡಿ. ದಡ್ಡಿ, ಶಿವಾನಂದ ಪಾಟೀಲ, ತಾತಾಸಾಹೇಬ ಬಾಂಗಿ, ನಾಗಪ್ಪ ಸನದಿ, ಪ್ರೊ. ಬಸವರಾಜ ಕಡ್ಡಿ, ಕಾಡು ಮಾಳಿ, ಸುಶೀಲಕುಮಾರ ಬೆಳಗಲಿ, ಡಾ. ಶಾರದ ಮುಳ್ಳೂರ, ರಾಜೇಶ್ವರಿ ಹಿರೇಮಠ, ಬಸವರಾಜ ಯಡ್ಡಹಳ್ಳಿ, ರುದ್ರಗೌಡ ಪಾಟೀಲ, ಎನ್.ಎಸ್. ದೇವರವರ, ಪರಶುರಾಮ ಮಹಾರಾಜನ್ನವರ, ದೇವಲ ದೇಸಾಯಿ, ಏಗಪ್ಪ ಸವದಿ, ಕೆ.ಟಿ. ಬಾಳಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.