ಕಡಪಟ್ಟಿ ಗ್ರಾಮ ಪಂಚಾಯಿತಿಗೆ ಬೀಗ: ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಜಮಖಂಡಿ 06 : ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿ ಪಿಡಿಒ ಅವರನ್ನು ಅಮಾನತು ಮಾಡಬೇಕು ಹಾಗೂ ಮಾಲಿಂಗರಾಯ ದೇವಸ್ಥಾನದ ಜಾಗೆಯ ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಮಾಲಿಂಗರಾಯ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕಡಪಟ್ಟಿ ಗ್ರಾಮದ ಕುರುಬ ಸಮಾಜದ ಮಾಲಿಂಗರಾಯ ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು ಬಾರಿಸುತ್ತಾ, ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ಬೀಗ ಜಡಿದರು. ಬಳಿಕ ಪಂಚಾಯತಿ ಕಚೇರಿ ಮುಂದೆ ಅಡುಗೆ ಮಾಡಿಕೊಂಡು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಪ್ರಕಾರ, ಹಲವು ವರ್ಷಗಳ ಹಿಂದೆ ಕಡಪಟ್ಟಿ ಗ್ರಾಮದ ಗೌಠಾಣ ಜಾಗೆಯನ್ನು ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯತಿಯಿಂದ ಅನುಮೋದನೆ ನೀಡಲಾಗಿತ್ತು. ಅದರಂತೆ ಜಾಗೆಯನ್ನು ಸ್ವಚ್ಛಗೊಳಿಸಿ ಹಲವು ವರ್ಷಗಳಿಂದ ಮಾಲಿಂಗರಾಯ ದೇವಸ್ಥಾನದ ಕಾರ್ಯಗಳಿಗೆ ಬಳಸಿಕೊಂಡು ಬರಲಾಗುತ್ತಿತ್ತು. ಇದೀಗ ಅದೇ ಜಾಗೆಯನ್ನು ಪಂಚಮಸಾಲಿ ಸಮಾಜದ ಭವನ ನಿರ್ಮಾಣಕ್ಕೆ ಬಳಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.