ಶಿರಹಟ್ಟಿ ಪಟ್ಟಣಕ್ಕೆ ರಿಂಗ್ ರೋಡ್: ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳಿಗೆ 60 ದಿನಗಳ ಅವಕಾಶ
ಶಿರಹಟ್ಟಿ 07: ಪಟ್ಟಣದ ಸಂಚಾರ ದಟ್ಟಣೆ ಹಾಗೂ ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಿಂಗ್ ರೋಡ್ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಗೊಂಡಿದ್ದು, ಯೋಜನೆ ಕುರಿತು ಸಾರ್ವಜನಿಕರು ತಮ್ಮ ಸಲಹೆ, ಆಕ್ಷೇಪಣೆ ಹಾಗೂ ದೂರುಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಎಚ್. ಹಾದಿಮನಿ ತಿಳಿಸಿದ್ದಾರೆ.
ರಿಂಗ್ ರೋಡ್ ನಿರ್ಮಾಣದಿಂದ ಪಟ್ಟಣದೊಳಗಿನ ವಾಹನ ಸಂಚಾರದ ಒತ್ತಡ ಕಡಿಮೆಯಾಗುವ ನೀರೀಕ್ಷೆಯಿದ್ದು, ಹೊರವಲಯದ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಯೋಜನೆಯ ವ್ಯಾಪ್ತಿಗೆ ಬರುವ ಪ್ರದೇಶಗಳು, ರಸ್ತೆ ಮಾರ್ಗ, ಭೂಮಿ ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸ್ಥಳೀಯರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ ಹಾಗೂ ಆಕ್ಷೇಪಣೆಗಳಿಗೆ ಮಹತ್ವ ನೀಡಲಾಗುತ್ತಿದ್ದು, ನಿಗದಿತ 60 ದಿನಗಳ ಅವಧಿಯಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಎಚ್. ಹಾದಿಮನಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ರಿಂಗ್ ರೋಡ್ ಯೋಜನೆಯಿಂದ ಪಟ್ಟಣದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯಾಗುವ ಹಿನ್ನೆಲೆಯಲ್ಲಿ, ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಅವರ ಅಭಿಪ್ರಾಯಗಳನ್ನು ದಾಖಲಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಅವಕಾಶವನ್ನು ಬಳಸಿಕೊಂಡು ತಮ್ಮ ಸಲಹೆ, ಆಕ್ಷೇಪಣೆ ಅಥವಾ ದೂರುಗಳನ್ನು ನಿಗದಿತ ಅವಧಿಯೊಳಗೆ ಪಪಂ ಕಾರ್ಯಲಯ ಬಂದು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.