ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆ
ಲೋಕದರ್ಶನ ವರದಿ
ಶಿರಹಟ್ಟಿ, ಅ. 9: ಶಿರಹಟ್ಟಿ ತಾಲ್ಲೂಕಿನ ಶ್ರೀಮಂತಗಡದಲ್ಲಿರುವ ಆದಿಶಕ್ತಿ ಹೊಳಲಮ್ಮದೇವಿ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 7ರಿಂದ 9 ಗಂಟೆಯವರೆಗೆ ಶ್ರೀ ಹೊಳಲಮ್ಮದೇವಿ ಪಾರಾಯಣ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲ್ಲೂಕಿನ ದೋತರ್ಗಾಂವ ಗ್ರಾಮದ ಮಣಿಪ್ರ ಕೊರಣೆಶ್ವರ ಮಹಾಸ್ವಾಮೀಜಿ ಪುರಾಣ ಪ್ರವಚನ ನೀಡಲಿದ್ದು, ಪ್ರಕಾಶ ಶಿವಬಸಪ್ಪ ಮೇಟಿಯವರು ಪಠಣ ಮಾಡಲಿದ್ದಾರೆ. ಹಾರ್ಮೋನಿಯಂನಲ್ಲಿ ವಿಠೋಬ ಕಾಶಣವರ ಹಾಗೂ ತಬಲಾದಲ್ಲಿ ಮಲ್ಲಿಕಾರ್ಜುನ ಶಹಾಪುರ ಸಹಕರಿಸಲಿದ್ದಾರೆ.
ಈ ಬಾರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಹಾಗೂ ಖೇಮಣ್ಣ ಪವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಅವುಗಳನ್ನು ಪೂರ್ಣಗೊಳಿಸಲು ಭಕ್ತಾದಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಆದ್ದರಿಂದ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯುವುದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.