ಅನುದಾನ, ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಖಂಡನೇ : ಶಾಸಕ ಡಾ ಚಂದ್ರು ಲಮಾಣಿ
ಶಿರಹಟ್ಟಿ 25 : ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಿರಹಟ್ಟಿ ಮಂಡಲದ ವತಿಯಿಂದ ಬುಧವಾರ ಬೃಹತ್ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಯಿತು.ಬುಧವಾರ ತಾಲೂಕಿನ ಛಬ್ಬಿ ಗ್ರಾಮದ ಹೊರದುರ್ಗಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುಮಾರು 8 ಕಿ.ಮೀ. ಪಾದಯಾತ್ರೆ ನಡೆಸಿ ಶಿರಹಟ್ಟಿ ಪಟ್ಟಣದ ನೆಹರು ವೃತ್ತಕ್ಕೆ ಆಗಮಿಸಿದರು.ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, “ಕ್ಷೇತ್ರದ ಜನರ ಒಳಿತಿಗಾಗಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ” ಎಂದರು.
ಹಾಲು ಹಾಗೂ ಬಸ್ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗಿದ್ದು, ಸರ್ಕಾರಕ್ಕೆ ಮತ ಹಾಕಿದ್ದಕ್ಕೆ ಜನರು ಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. ಕ್ಷೇತ್ರದಲ್ಲಿ ?135 ಕೋಟಿ ಮೊತ್ತದ ಯೋಜನೆ ಪೂರ್ಣಗೊಳ್ಳದೇ ?112 ಕೋಟಿ ಬಿಲ್ ಸಲ್ಲಿಸಲಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಆಡಳಿತ ‘ನಾಳೆ ಬಾ’ ಎಂಬ ಮಂತ್ರಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು. ಕೆರೆಗಳ ಮೇಲೆ ಪೈಪ್ ಅಳವಡಿಸಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸರ್ಕಾರಕ್ಕೆ ಉತ್ತರ ನೀಡಲಾಗುತ್ತಿದೆ. ಬರದಿಂದ ರೈತರ ಬದುಕು ಕಂಗಾಲಾಗಿದ್ದರೂ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿ ಅನುದಾನ ಕೇಳಿದರೆ ಹಾರಿಕೆಯ ಉತ್ತರ ನೀಡಲಾಗುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಬೇಡಿ ಎಂದು ಅಧಿಕಾರಿಗಳ ಪರವಾಗಿ ವಾದಿಸಲಾಗುತ್ತಿದೆ ಎಂದು ದೂರಿದರು.
ಪ್ರಗತಿ ಪರೀಶೀಲನಾ ಸಭೆಗೆ ಕರೆದರೂ ಕ್ಷೇತ್ರದ ಸಮಸ್ಯೆಗಳನ್ನು ಹೇಳಲು ಅವಕಾಶ ನೀಡುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇ ಸಾಕ್ಷಿ ಎಂದು ಹೇಳಿದರು.“ಸರ್ಕಾರದ ವಿರುದ್ಧ ಮಾತನಾಡಿದರೆ ದಮಕಿ ಹಾಕಲಾಗುತ್ತಿದೆ.
ಮುಂದಿನ ಚುನಾವಣೆಯಲ್ಲಿ ನಿಮಗೆ ಉಳಿಗಾಲವಿಲ್ಲ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ” ಎಂದು ಲಮಾಣಿ ಹೇಳಿದರು.ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಕರೆಸಿ ಕಾಮಗಾರಿ ಆರಂಭಿಸಬೇಕು.
ಇಲ್ಲವಾದರೆ ಹೊಳೆಇಟಗಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಗಂಗಪ್ಪ ಅವರಿಗೆ ಮನವಿ ಸಲ್ಲಿಸಿ, ಅದನ್ನು ರಾಜ್ಯಪಾಲರಿಗೆ ಕಳುಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಿಪ್ಪಣ್ಣ ಕೊಂಚಿಗೇರಿ, ರಾಮಣ್ಣ ಕಂಬಳಿ, ತಿಮ್ಮರಡ್ಡಿ ಮರಡ್ಡಿ, ರಾಜು ಬೊಮ್ಮನಕಟ್ಟಿ, ಪ್ರವೀಣ ಪಾಟೀಲ, ಶಂಕರ ಭಾವಿ, ಶರಣು ಚನ್ನೂರ, ಜಾನು ಲಮಾಣಿ, ಸಂದೇಶ ಗಾಣಿಗೇರ, ಜಗದೀಶ ತೇಲಿ, ಮಂತೇಶ ಹಲ್ಲೆಪ್ಪನವರ,, ಪರಶು ಬಂಡಿವಾಡ್ಡರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.