ಹೂವಿನ ಹಡಗಲಿ

ಸರ್ವಾಧಿಕಾರ ನಡೆಸಿದ ಕಾಂಗ್ರೆಸ್ ಸಂವಿಧಾನ ರಕ್ಷಣೆ ನಾಟಕ - ವಾಗ್ದಾಳಿ

ಸರ್ವಾಧಿಕಾರ ನಡೆಸಿದ ಕಾಂಗ್ರೆಸ್ ಸಂವಿಧಾನ ರಕ್ಷಣೆ ನಾಟಕ - ವಾಗ್ದಾಳಿ
Congress, which exercised dictatorial rule, is now staging a drama about protecting the Constitution


ಲೋಕದರ್ಶನ ವರದಿ 

            ಹೂವಿನಹಡಗಲಿ ನ.26:  ಈ ಹಿಂದೆ  ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಸಂವಿಧಾನವನ್ನು ಅಮಾನತಿನಲ್ಲಿಟ್ಟು ಸರ್ವಾಧಿಕಾರಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವು  ಇದೀಗ ಸಂವಿಧಾನದ ರಕ್ಷಣೆಯ  ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್‌.ಮಹೇಶ್  ವಾಗ್ದಾಳಿ ನಡೆಸಿದರು.ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಪಕ್ಷದಿಂದ ”ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

          ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರು ಕೇವಲ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಈಗ ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದ,  ಭಾರತ ಪ್ರಧಾನಿ ನರೇಂದ್ರ ಮೋದಿ ಅವರು  ಬಾಬಾಸಾಹೇಬರ ಸಂವಿಧಾನಕ್ಕೆ  ಸದಾ ಗೌರವ ನೀಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

               ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಪರಂಪರೆಯನ್ನು ಪರಿಚಯಿಸಿದ್ದೇ ಬಿಜೆಪಿ ಸರ್ಕಾರ ಎಂದು ಸ್ಮರಿಸಿದರು. 1949ರ ನವೆಂಬರ್ 26ರಂದು ಬಾಬಾಸಾಹೇಬ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು 114 ದಿನಗಳ ಸುದೀರ್ಘ ಚರ್ಚೆಯ ಬಳಿಕ ಸಂವಿಧಾನವನ್ನು ರಚನಾ ಸಭೆಯ ಮುಂದೆ ಮಂಡಿಸಿತ್ತು.

               ಈ ಐತಿಹಾಸಿಕ ದಿನದ ಸ್ಮರಣಾರ್ಥ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನವೆಂಬರ್ 26 ಅನ್ನು ಅಧಿಕೃತವಾಗಿ ’ಸಂವಿಧಾನ ದಿನ’ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿವರ್ಷವೂ ದೇಶಾದ್ಯಂತ ಸಂವಿಧಾನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ವಿವರಿಸಿದರು.

             ಶಾಸಕ ಕೃಷ್ಣನಾಯಕ ಮಾತನಾಡಿ ಬಿಜೆಪಿ ಪಕ್ಷ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಸಂವಿಧಾನ ಕ್ಕೆ ಗೌರವ ನೀಡುತ್ತಾ ಬಂದಿದ್ದಾರೆ.ಸಂವಿಧಾನ ರಕ್ಷಣೆ ಮಾಡಿದರೆ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ ಎಂದರು. ಎಸ್‌.ಟಿ.ಮೋರ್ಚ್‌ ರಾಜ್ಯಾದ್ಯಕ್ಷ ಬಂಗಾರ ಹನುಮಂತಪ್ಪ , ಪುತ್ರೇಶ ಮಾತನಾಡಿದರು.  ಮಾಜಿ ಶಾಸಕ  ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ  ಸಂಜೀವ ರೆಡ್ಡಿ, ಅಲ್ಪಸಂಖ್ಯಾತ ಮೋರ್ಚಾದ                  ಜಿಲ್ಲಾಧ್ಯಕ್ಷ ಮಂಜುನಾಥ್ ಜೈನ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೀರಾಬಾಯಿ, ಜಿಲ್ಲಾ ಉಪಾಧ್ಯಕ್ಷರಾದ  ಹಣ್ಣಿ ಶಶಿಧರ್, ಜಿಲ್ಲಾ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ  ಈ ಟಿ ಲಿಂಗರಾಜ್, ಮಂಡಲ ಅಧ್ಯಕ್ಷರಾದ ಪೂಜಾರ್ ಮಲ್ಲಿಕಾರ್ಜುನ ,  ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಹೆಚ್‌.ಪೂಜಪ್ಪ, ಬೀರಬ್ಬಿ ಬಸವರಾಜ ಸೇರಿದಂತೆ  ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ