ಬಡತನಮುಕ್ತ, ಮಕ್ಕಳ ಸ್ನೇಹಿ ಗ್ರಾಮ ನಿರ್ಮಾಣಕ್ಕೆ ಒತ್ತು
ಗದಗ 26: ಅಭಿವೃದ್ಧಿ ಯೋಜನೆಗಳು ಕೇವಲ ಸರ್ಕಾರದ ಕಾರ್ಯಕ್ರಮಗಳಾಗಿ ಉಳಿಯದೆ, ಜನರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಜನರ ಯೋಜನೆಗಳಾಗಬೇಕು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಜನರ ಸಹಭಾಗಿತ್ವವೇ ಪ್ರಮುಖವಾಗಿದ್ದು, ಈ ಉದ್ದೇಶದಿಂದ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು
.ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದ ಆದರ್ಶ ಗ್ರಾಮವಸತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆ ರೂಪಿಸುವುದು ಜನವಸತಿ ಸಭೆಗಳ ಮುಖ್ಯ ಉದ್ದೇಶವಾಗಿದೆ. ಯೋಜನೆಗಳ ರೂಪಿಸುವಿಕೆ ಮತ್ತು ಅನುಷ್ಠಾನದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳ ಮೊದಲ ಸಭೆಯಲ್ಲಿಯೇ ಸೂಚನೆ ನೀಡಲಾಗಿದೆ.
.ಗ್ರಾಮೀಣ ಪ್ರದೇಶಗಳಲ್ಲಿ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮಸಭೆ ಹಾಗೂ ಗ್ರಾಮ ಪಂಚಾಯಿತಿ ಸಭೆಗಳ ಮೂಲಕ ಅಭಿವೃದ್ಧಿಯ ಆದ್ಯತೆಗಳನ್ನು ನಿರ್ಧರಿಸಲಾಗುತ್ತದೆ. ಜನರ ಅಭಿಪ್ರಾಯದ ಆಧಾರದಲ್ಲಿಯೇ ಯೋಜನೆಗಳು ರೂಪುಗೊಳ್ಳಲಿದ್ದು, ಫಲಾನುಭವಿಗಳ ಆಯ್ಕೆಯೂ ಗ್ರಾಮಸಭೆಯ ನಿರ್ಧಾರದಂತೆ ನಡೆಯಲಿದೆ. ಇದರಿಂದ ಗ್ರಾಮಗಳ ನೈಜ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಹಿಂದೆ ಪ್ರಭಾವ ಮತ್ತು ಒತ್ತಡಗಳ ಆಧಾರದ ಮೇಲೆ ಕೆಲವು ಪ್ರದೇಶಗಳಿಗೆ ಹೆಚ್ಚಿನ ಅನುದಾನ ಹಂಚಿಕೆಯಾಗುತ್ತಿತ್ತು. ಆದರೆ, ನಿಗದಿತ ಮಾನದಂಡಗಳಡಿ ತಳಮಟ್ಟದಿಂದಲೇ ಯೋಜನೆ ರೂಪಿಸುವುದರಿಂದ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸಮಾನ ಮತ್ತು ನ್ಯಾಯಸಮ್ಮತವಾಗಿ ಅನುದಾನ ಹಂಚಿಕೆಯಾಗಲಿದೆ. ಆಯ್ದ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ