ಮಹಲಿಂಗಪುರ

ಹಕ್ಕುಪತ್ರ, ರಸ್ತೆ, ಗಟಾರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಪಾದಗಟ್ಟಿ ನಿವಾಸಿಗಳ ಆಗ್ರಹ

ಹಕ್ಕುಪತ್ರ, ರಸ್ತೆ, ಗಟಾರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಪಾದಗಟ್ಟಿ ನಿವಾಸಿಗಳ ಆಗ್ರಹ
Residents of Padagatti demand the provision of basic infrastructure, including title deeds, roads,

            ಮಹಾಲಿಂಗಪುರ 26 : ಪಟ್ಟಣದ ಕೆಂಗೇರಿಮಡ್ಡಿಯ ಮಹಾಲಿಂಗೇಶ್ವರ ಪಾದಗಟ್ಟಿ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಸುಭದ್ರ ಮನೆ ನಿರ್ಮಾಣಕ್ಕೆ ಅವಕಾಶ ಹಾಗೂ ವಿದ್ಯುತ್, ಕುಡಿಯುವ ನೀರು, ರಸ್ತೆ ಮತ್ತು ಗಟಾರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಪಾದಗಟ್ಟಿ ನಿವಾಸಿಗಳು ಗುರುವಾರ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು. 

                ಕೆಂಗೇರಿಮಡ್ಡಿಯ ಜ್ಞಾನ ಗುರುಕುಲ ಶಾಲೆಯ ಸಮೀಪವಿರುವ ಮಹಾಲಿಂಗೇಶ್ವರ ಪಾದಗಟ್ಟಿ ಪ್ರದೇಶದ ಸರ್ವೆ ನಂಬರ್ 30ರ ಸರ್ಕಾರಿ ಜಾಗದಲ್ಲಿ ನಿವಾಸಿಗಳು ತಮ್ಮ ಕೈಲಾದಷ್ಟು ಹಣ ಖರ್ಚು ಮಾಡಿಕೊಂಡು ಶೆಡ್ ಮಾದರಿಯ ಮನೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ, ಈ ಪ್ರದೇಶಕ್ಕೆ ಇಂದಿಗೂ ಅಗತ್ಯ ಮೂಲಭೂತ ಸೌಲಭ್ಯಗಳು ಸಮರ​‍್ಕವಾಗಿ ದೊರೆಯದಿರುವುದು ನಿವಾಸಿಗಳ ಬದುಕನ್ನು ಸಂಕಷ್ಟಕ್ಕೆ ದೂಡಿದೆ. 

            ವಿಶೇಷವಾಗಿ ಮಹಾಲಿಂಗಪುರ ಪುರಸಭೆಯ 14ನೇ ವಾರ್ಡ್‌ನಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಈ ಭಾಗದಲ್ಲಿ ಸಮರ​‍್ಕ ರಸ್ತೆ ಹಾಗೂ ಗಟಾರು ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯಿಲ್ಲದಂತಾಗಿದೆ. ರಸ್ತೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಂದ ನಿವಾಸಿಗಳು ಪ್ರತಿನಿತ್ಯ ಪರದಾಡುವಂತಾಗಿದೆ. 

                 ವಿದ್ಯುತ್ ಸಂಪರ್ಕದ ಕೊರತೆಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಮಕ್ಕಳ ಓದು-ಬರಹಕ್ಕೆ ತೊಂದರೆಯಾಗುತ್ತಿದ್ದು, ಕನಿಷ್ಠ ಸೌಲಭ್ಯಗಳಿಲ್ಲದೆ ಬದುಕು ನಡೆಸುವ ಪರಿಸ್ಥಿತಿ ಎದುರಾಗಿದೆ. ಕಾಡಿನಲ್ಲಿ ವಾಸ ಮಾಡಿದಂತಾಗಿದೆ. ನಮ್ಮ ಬದುಕು ಪಶುಗಳ ಬದುಕಿಗಿಂತಲೂ ಕಷ್ಟಕರವಾಗಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

                ಆದ್ದರಿಂದ ಪಾದಗಟ್ಟಿ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಸುಭದ್ರ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ತುರ್ತಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. 14ನೇ ವಾರ್ಡ್‌ನ 300ಕ್ಕೂ ಹೆಚ್ಚು ಕುಟುಂಬಗಳ ಹಿತದೃಷ್ಟಿಯಿಂದ ಸುಸಜ್ಜಿತ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

               ಕೇವಲ ಭರವಸೆ ನೀಡದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ನಿವಾಸಿಗಳ ಬಹುದಿನಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

              ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ, ಹಣಮಂತ ಜಮಾದಾರ, ತಿಪ್ಪು ಬಂಡಿವಡ್ಡರ, ದುಂಡಪ್ಪ ನಾಗನೂರ, ರಮೇಶ ದಡ್ಡಿಮನಿ, ಪ್ರಕಾಶ ಪಾತ್ರೋಟ, ಹಣಮಂತ ಗಿರೆಪ್ಪಗೌಡರ, ಈಶ್ವರ ಮುರಗೋಡ, ಶಶಿಕಾಂತ ಬೆಳಗಲಿ, ರಾಮಪ್ಪ ಕೌಜಲಗಿ ಮತ್ತು ಚನ್ನಪ್ಪ ಬಂಡಿ ಸೇರಿದಂತೆ ಪಾದಗಟ್ಟಿ ನಿವಾಸಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ