ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ರವಿಕಾಂತ ಅಂಗಡಿ ಭರ್ಜರಿ ಮತಯಾಚನೆ
ಶಿರಹಟ್ಟಿ 21: ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಪರವಾಗಿ ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಅವರು ಶಿರಹಟ್ಟಿ ಪಟ್ಟಣದಲ್ಲಿ ಪದವೀಧರ ಮತದಾರರನ್ನು ಭೇಟಿಯಾಗಿ ಭರ್ಜರಿ ಮತಯಾಚನೆ ನಡೆಸಿದರು.
ಬುಧವಾರ ಪಟ್ಟಣದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ರವಿಕಾಂತ ಅಂಗಡಿ ಅವರು, ಪದವೀಧರ ಮತದಾರರೊಂದಿಗೆ ಸಮಾಲೋಚನೆ ನಡೆಸಿ ಎಸ್.ವಿ. ಸಂಕನೂರ ಅವರ ಸಾಧನೆಗಳು, ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಕೈಗೊಂಡಿರುವ ಕ್ರಮಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಕುರಿತು ವಿವರಿಸಿದರು.
ಸಂಕನೂರ ಅವರು ಪದವೀಧರರ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅನುಭವ ಮತ್ತು ಬದ್ಧತೆ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಿದರು.ಎಸ್.ವಿ. ಸಂಕನೂರ ಅವರು ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪದವೀಧರರ ವಿಶ್ವಾಸ ಗಳಿಸಿದ್ದಾರೆ. ಈ ಬಾರಿಯೂ ಅವರನ್ನು ಮೂರನೇ ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಿರಂತರತೆ ನೀಡಬೇಕು.
ಪದವೀಧರ ಮತದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಂಕನೂರ ಅವರ ಪರವಾಗಿ ಮತ ಚಲಾಯಿಸಿ ಭರ್ಜರಿ ಗೆಲುವು ತಂದುಕೊಡಬೇಕು ಎಂದು ರವಿಕಾಂತ ಅಂಗಡಿ ಮನವಿ ಮಾಡಿದರು.ಪದವೀಧರರ ಉದ್ಯೋಗ, ಶಿಕ್ಷಣ, ಮೂಲಸೌಕರ್ಯ, ಸರ್ಕಾರಿ ಸೌಲಭ್ಯಗಳು ಹಾಗೂ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮತದಾರರೊಂದಿಗೆ ಚರ್ಚೆ ನಡೆಸಲಾಯಿತು.
ಸಂಕನೂರ ಅವರ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಶೀವು ಚಕ್ರಸಾಲಿ, ರಾಜು ಮಾತಾಡೆ, ಪ್ರಕಾಶ ಮೇಟಿ, ಸುನೀಲ ಪವಾರ, ಪರಶುರಾಮ ಡೊಂಕಬಳ್ಳಿ, ಭರಮಪ್ಪ ಬಳೂಟಗಿ, ಆನಂದ ಕೊಡ್ಲಿ, ಮಂಜುನಾಥ ಕುಳಗೇರಿ, ಸಂತೋಷ ಕರಿಗಾರ, ಮಂಜುನಾಥ ಕಲವರಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.