ಅಥಣಿ

ಅನಂತಪುರದಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ

ಅನಂತಪುರದಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ


ಅಥಣಿ 21 : ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೃಷ್ಣಾ ನದಿಯಿಂದ ನೀರು ಹರೆಸಿ ಎಂದು ಆಗ್ರಹಿಸಿ ಅನಂತಪುರ ಗ್ರಾಮದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಶಾಮಿಯಾನ ಹಾಕಿ ಸಾವಿರಾರು  ರೈತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು  ಐದು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿ ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿದರು.


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ  ತಹಶೀಲ್ದಾರ ಸಿದರಾಯ ಭೋಸಗಿ, ಕೃಷ್ಣಾ ನದಿಯ ಮೇಲೆ ಅಂದಾಜು 360 ಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿಗಾಗಿ ಅವಲಂಬಿಸಿವೆ ಮತ್ತು ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣವೂ ಕೂಡ ಝೀರೋ ಆಗಿರುವುದರಿಂದ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಕಾಲುವೆಗಳಿಗೆ ನೀರು ಹರಿಸುವುದು.


ಕಷ್ಟಕರ ಎಂದ ಅವರು ಅನಂತಪುರದಲ್ಲಿ ತೀವೃ ಗತಿಯ ಬರ ಇದೆ ಹೀಗಾಗಿ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಇದೇ ದಿನ ಲಿಖಿತ ಮನವಿ ಮತ್ತು ಮನವರಿಕೆ ಮಾಡುವೆ ಮತ್ತು ತಾವು ಪ್ರತಿಭಟನೆ ಹಿಂಪಡಿಯಬೇಕು ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ  ಬಿಜೆಪಿ ಧುರೀಣ ದಾದಾ ಸಿಂಧೆ, ಅನಂತಪುರ ಗ್ರಾಮದಲ್ಲಿ ಬೇಸಿಗೆ ಅವಧಿಗೂ ಮೊದಲೇ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ.


ಇದೇ ರೀತಿ ಮುಂದುವರೆದಲ್ಲಿ ಬೇಸಿಗೆ ಅವಧಿಯಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿ ಜನ, ಜಾನುವಾರುಗಳು ಗ್ರಾಮ ತೊರೆಯುವ ಸ್ಥಿತಿ ನಿರ್ಮಾಣವಾಗುತ್ತದೆ ಹೀಗಾಗಿ ಕೂಡಲೇ ಕಾಲುವೆಗಳಿಗೆ ಕನಿಷ್ಠ 1 ಟಿ.ಎಮ್‌.ಸಿ ನೀರು ಹರೆಸಿ ಎಂದು ಆಗ್ರಹಿಸಿದ ಅವರು ಕಾಲುವೆಗಳಿಗೆ ನೀರು ಹರಿಸುವವರೆಗೂ ನಮ್ಮ ಗ್ರಾಮದ ಕೆಲ ಮಹನೀಯರು ಉಪವಾಸ ಸತ್ಯಾಗೃಹ ಕೈಗೊಳ್ಳುತ್ತಾರೆ ಎಂದರು.   ರೈತ ಮುಖಂಡರಾದ  ಓಂ ಪ್ರಕಾಶ ಡೊಳ್ಳಿ, ಅಶೋಕ ಪಾಟೀಲ, ಮೃತ್ಯುಂಜಯ ಹಿರೇಮಠ ಮಾತನಾಡಿ, ಬಸವೇಶ್ವರ್  ಕಾಲುವೆ ಮೂಲಕ ಅನಂತಪುರ ಗ್ರಾಮಕ್ಕೆ ನೀರು ಹರಿಸಬೇಕು.


ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಪವಾಸದ ಜೊತೆಗೆ ಉಗ್ರ ಪ್ರತಿಭಟನೆ ಮಾಡುವುದರ ಮೂಲಕ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಉಪ ತಹಶಿಲ್ದಾರರ ಅಮೀತಕುಮಾರ ಡವಳೇಶ್ವರ, ರಾಜು ಸಾಲಿಮಠ, ಸಂಗಪ್ಪ ಜಾಬಗೌಡರ, ರೇವಣಸಿದ್ದ ನಕಾತೆ, ಶಿವಾನಂದ ಖೋತ, ಮಹಾಂತೇಶ ಸಾಲಿಮಠ,ಗಜಾನನ ಕಾಶಿದ, ಶಿವಾನಂದ ಪಾಟೀಲ, ಸಿದ್ರಾಯ ಕರೋಲಿ,ದತ್ತು ಶಿಂದೆ, ಪಾಂಡುರಂಗ ಈರಕರ, ಬಾಹುಸಾಹೇಬ ಪತ್ತಾರ, ರೈತ ಮಹಿಳೆಯರು, ಸಂಘಟನೆಯವರು, ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ