ಅಥಣಿ

ಸಾಲ ಮರುಪಾವತಿ ಮಾಡಿ ಸಂಘದ ಪ್ರಗತಿಗೆ ಸಹಕರಿಸಿ: ರಾವಸಾಬ ಐಹೊಳೆ

ಸಾಲ ಮರುಪಾವತಿ ಮಾಡಿ ಸಂಘದ ಪ್ರಗತಿಗೆ ಸಹಕರಿಸಿ: ರಾವಸಾಬ ಐಹೊಳೆ


ಅಥಣಿ 02: ಸಂಘದಿಂದ ಸಾಲ ಪಡೆದ ಸದಸ್ಯರು ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಪ್ರಗತಿಗೆ ಸಹಕರಿಸಬೇಕು ಎಂದು ಭೂಮಿ ಆರ್‌.ಎನ್‌.ಎ. ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಲ್ಯಾಂಡ್ ಡೆವಲಪರ್ ರಾವಸಾಬ ಐಹೊಳೆ ಕರೆ ನೀಡಿದರು. ಪಟ್ಟಣದ ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸಂಘದ 4ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ಸಂಘವು 1,108 ಸದಸ್ಯರನ್ನು ಹೊಂದಿದ್ದು, 24.23 ಲಕ್ಷ ಶೇರು ಬಂಡವಾಳ ಹಾಗೂ 10.15 ಕೋಟಿ ಠೇವಣಿ ಹೊಂದಿದೆ. ಕಳೆದ ಸಾಲಿನಲ್ಲಿ 9.41 ಕೋಟಿ ಸಾಲ ವಿತರಿಸಲಾಗಿದ್ದು, 21.20 ಲಕ್ಷ ಲಾಭ ಗಳಿಸಿದೆ. ಸಂಘವು ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿದೆ ಎಂದರು.  

ಸಂಘದಿಂದ ಸಾಲ ಪಡೆದ ಸದಸ್ಯರಿಗೆ ಎಸ್ಬಿಐ ಲೈಫ್ ಹಾಗೂ ಕ್ರೆಡಿಟ್‌ಎಕ್ಸೆಸ್ ಇನ್ಶೂರೆನ್ಸ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಮೆ ಮಾಡಿಸಿಕೊಂಡಿದ್ದ ಸದಸ್ಯ ರಾಜೇಂದ್ರ ಮನೋಹರ ಕೋರೆ ನಿಧನರಾದ ಹಿನ್ನೆಲೆಯಲ್ಲಿ 50 ಸಾವಿರ ವಿಮಾ ಕ್ಲೇಮ್ ಮೊತ್ತವನ್ನು ವಾರಸುದಾರರಿಗೆ ಚೆಕ್ ಮೂಲಕ ವಿತರಿಸಲಾಗಿದೆ. ಅಲ್ಲದೆ, ಸಂಘದ ಮೂಲಕ ಫ್ಲಾಟ್ ಖರೀದಿಸುವವರಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ ಮಾತನಾಡಿ, ರಾವಸಾಬ ಐಹೊಳೆ ಅವರು ಲ್ಯಾಂಡ್ ಡೆವಲಪ್ಮೆಂಟ್, ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಹೇಳಿದರು.  

ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ಮಿರಜಕರ ವಾರ್ಷಿಕ ವರದಿ ಮಂಡಿಸಿದರು. ಸಭೆಯ ಬಳಿಕ ಭೂಮಿ ಆರ್‌.ಎನ್‌.ಎ. ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅನೀಲ ಪಾಟೀಲ, ಮಲ್ಲಿಕಾರ್ಜುನ ದಳವಾಯಿ, ಆನಂದ ಟೊಣಪಿ, ವೀಲೀನ ಯಳಮೇಲಿ ಸೇರಿದಂತೆ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಆದರ್ಶ ಶಿಕ್ಷಣ ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ