ಅನ್ನದಾತರ ಅಹೋರಾತ್ರಿ ಧರಣಿ ಹುಬ್ಬಳ್ಳಿಗೆ ಶಿಪ್ಟ್ : ಪಾದಯಾತ್ರೆ ಮೂಲಕ ಸಚಿವ ಜೋಶಿ ಮನೆಯತ್ತ ರೈತರ ಹೆಜ್ಜೆ
ಬೆಳಗಾವಿ : ಎಂಎಸ್ ಪಿ ಹಾಗೂ ಎಫ್ ಆರ್ ಪಿ ನಿಗದಿ ಸೇರಿದಂತೆ ಕೆಲ ಬೇಡಿಕೆಗಳಿಗಾಗಿ ಎರಡು ದಿನದಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಹೋರಾಟವು ಹುಬ್ಬಳ್ಳಿಗೆ ಶಿಪ್ಟ್ ಆಗಿದ್ದು, ಹತ್ತರಗಿಯ ಟೋಲ್ ನಾಕಾದಿಂದ ಹುಬ್ಬಳಿಯತ್ತ ಕಾಲ್ನಡಿಗೆಯಲ್ಲಿ ಅನ್ನದಾತರು ಹೊರಟಿದ್ದಾರೆ. ಅಲ್ಲಿ ಮತ್ತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದಾರೆಂದು ಹೇಳಲಾಗಿದೆ.
ಎಂಎಸ್ ಪಿ ಹಾಗೂ ಎಫ್ ಆರ್ ಪಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಳನ್ನು ಈಡೇರಿಸುವಂತೆ ರೈತರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಅವರ ಬೇಡಿಕೆ ವಿಷಯಗಳ ಕುರಿತು ಚರ್ಚೆ ನಡೆಸಲು ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದರು.
ಈ ನಿಟ್ಟಿನಲ್ಲಿ ರೈತರು ಕಳೆದ ಎರಡು ದಿನಗಳಿಂದ ಜಿಲ್ಲೆಯ ಗಡಿಭಾಗದ ಕೊಗನೊಳಿ ಹಾಗೂ ಹತ್ತರಗಿ ಮತ್ತು ಹಿರೇಭಾಗೇವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಗಳಲ್ಲಿನ ಟೋಲ್ ನಾಕಾಗಳನ್ನು ಬಂದ್ ಮಾಡುವ ಮೂಲಕ ಅಹೋರಾತ್ರಿ ಹೋರಾಟ ಆರಂಭಿಸಿದ್ದರು.
ಇದರಿಂದ ಎರಡು ದಿನ ವರೆಗೆ ಅಹೋರಾತ್ರಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿ ನಾಗರಿಕರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕೇಂದ್ರ ಸರಕಾರಕ್ಕೆ ಬುಧವಾರ ಸಂಜೆ ವರೆಗೆ ಗಡುವು ನೀಡಿದ್ದರು. ಆದರೆ ಕೇಂದ್ರ ಸರಕಾರ ಯಾವದೇ ನಿಲವು ಸ್ಪಷ್ಟ ಪಡಿಸದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಸ್ಪೋಟ್ ಗೊಂಡಿದ್ದು, ಈಗ ರೈತರ ನಡುಗೆ ಹುಬ್ಬಳ್ಳಿ ಕಡೆಗೆ ಪ್ರಾರಂಭಿಸಿದ್ದಾರೆ.
ಬುಧವಾರ ಸಂಜೆ ಕೊಗನೋಳಿ ಹಾಗೂ ಹತ್ತರಗಿ ಟೋಲ್ ನಾಕಾಗಳಿಂದ ಬುಧವಾರ ಸಂಜೆ ರೈತರು ಹುಬ್ಬಳ್ಳಿ ಕಡೆಗೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ. ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮತ್ತೆ ಮುತ್ತಿಗೆ ಹಾಕುವ ಎಚ್ವರಿಕೆ ನೀಡಿದ್ದಾರೆ ಎನ್ನಲಾಗಿದೆ.