ಎಲಬುರ್ಗ

ಅಧ್ಯಾತ್ಮದಿಂದ ನೆಮ್ಮದಿ, ಸಂಸ್ಕಾರದಿಂದ ಸಾರ್ಥಕ ಬದುಕು: ಅಭಿನವ ಒಪ್ಪತೇಶ್ವರ ಶ್ರೀಗಳು

ಅಧ್ಯಾತ್ಮದಿಂದ ನೆಮ್ಮದಿ, ಸಂಸ್ಕಾರದಿಂದ ಸಾರ್ಥಕ ಬದುಕು: ಅಭಿನವ ಒಪ್ಪತೇಶ್ವರ ಶ್ರೀಗಳು

ಯಲಬುರ್ಗಾ 13:  ಮನುಷ್ಯ ಜೀವನದಲ್ಲಿ ನೆಮ್ಮದಿ, ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಅಧ್ಯಾತ್ಮದ ಮಾರ್ಗ ಅನುಸರಿಸುವುದು ಅತ್ಯಗತ್ಯ. ಧಾರ್ಮಿಕ ಆಚರಣೆಗಳು ವ್ಯಕ್ತಿಯಲ್ಲಿ ಸದ್ಗುಣಗಳನ್ನು ಬೆಳೆಸುವುದರ ಜತೆಗೆ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಲು ಸಹಕಾರಿಯಾಗುತ್ತವೆ ಎಂದು ಗುಳೇದಗುಡ್ಡ ಒಪ್ಪತೇಶ್ವರಮಠದ ಶ್ರೀ ಮು.ನಿ.ಪ್ರ. ಅಭಿನವ ಒಪ್ಪತೇಶ್ವರ ಸ್ವಾಮೀಜಿಗಳು ಹೇಳಿದರು.  ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂಗೈಕ್ಯ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳ 40ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  ಶ್ರೀಧರ ಮುರಡಿ ಹಿರೇಮಠವು ತನ್ನದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು ಧಾರ್ಮಿಕ ಸೇವೆಯ ಜತೆಗೆ ಬಡ ವಿದ್ಯಾರ್ಥಿಗಳಿಗೆ ಮಠದಲ್ಲಿ ಆಶ್ರಯ ಕಲ್ಪಿಸಿ, ಅನ್ನದಾಸೋಹ ಮತ್ತು ಶಿಕ್ಷಣದಾಸೋಹದ ಮೂಲಕ ಅವರ ಭವಿಷ್ಯ ರೂಪಿಸಲು ಶ್ರಮಿಸಿದ್ದರು. ಅವರ ಸೇವೆ, ತ್ಯಾಗ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಸ್ಮರಿಸಿದರು. ಪ್ರತಿಯೊಬ್ಬರೂ ಸ್ವಪ್ರಯತ್ನದಿಂದ ಬದುಕಿನಲ್ಲಿ ಸಾಧನೆ ಮಾಡಬೇಕು. ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹಿರಿಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿಗಳು ಶ್ರೀ ಷ.ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಭಕ್ತಿ, ಭಾವೈಕ್ಯತೆ ಮತ್ತು ಪರಸ್ಪರ ಸಾಮರಸ್ಯ ಬೆಳೆದಾಗ ಶಾಂತಿ ಹಾಗೂ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸಿಗೆ ಶಾಂತಿ ನೀಡುವುದರ ಜತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸುತ್ತವೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಪೂಜೆ, ಪ್ರಾರ್ಥನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಈ ಸಂದರ್ಭದಲ್ಲಿ ಅಮರೇಶ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ, ಅಡವಯ್ಯ ಕಲ್ಯಾಣಮಠ, ಬಸವರಾಜ ಅಧಿಕಾರಿ,ಮಹೇಶ ಹುಬ್ಬಳ್ಳಿ, ಮಲ್ಲಪ್ಪ ಭೂತೆ, ಬಸವರಾಜ ಕೊಳ್ಳಿ, ಸುರೇಶ ವಣಗೇರಿ, ಶಿವುಕುಮಾರ ಸಾದರ್, ಕಳಕಪ್ಪ ಗದ್ದಿ, ಶರಣಪ್ಪಗೌಡ ಉಳ್ಳಾಗಡ್ಡಿ, ಶರಣಪ್ಪ ಹುಬ್ಬಳ್ಳಿ, ಈಶಪ್ಪ ಬನ್ನಿಕೊಪ್ಪ, ಮುತ್ತಪ್ಪ ಸುರ್ಕೊಡ, ಮಲ್ಲಯ್ಯ, ಶರಣಪ್ಪ ದಿವಟರ್, ಉಮೇಶ ಕುಂಬಾರ, ಮಲ್ಲಪ್ಪ ಗದ್ದಿ ಸೇರಿದಂತೆ ಅನೇಕ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ