ಎಲಬುರ್ಗ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ, ಕಲೆಗೂ ಆದ್ಯತೆ ನೀಡಲಿ: ಸುಧೀರ ಕೊರ್ಲಳ್ಳಿ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ, ಕಲೆಗೂ ಆದ್ಯತೆ ನೀಡಲಿ: ಸುಧೀರ ಕೊರ್ಲಳ್ಳಿ

ಯಲಬುರ್ಗಾ   13: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜು ಜೀವನವು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಹಂತವಾಗಿದ್ದು, ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಗುರಿ ಸಾಧನೆಗೆ ಮುಂದಾಗಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಧೀರ ಕೊರ್ಲಳ್ಳಿ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ 2026-27ನೇ ಶೈಕ್ಷಣಿಕ ಸಾಲಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ಶಿಸ್ತು, ಪರಿಶ್ರಮ, ಸಮಯಪಾಲನೆ ಹಾಗೂ ನಿರಂತರ ಅಧ್ಯಯನದ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕಾಲೇಜಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರುವಂತಾಗಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಅಶೋಕ ಬಿ. ಕೆಂಚರಡ್ಡಿ ಮಾತನಾಡಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಂಡು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪದವಿ ಶಿಕ್ಷಣವು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ಜ್ಞಾನ, ಕೌಶಲ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಹಂತವಾಗಿದೆ. ಕಾಲೇಜಿನ ವಿವಿಧ ಸಮಿತಿಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  

ವಿಶೇಷ ಉಪನ್ಯಾಸ ನೀಡಿದ ಅಂತರರಾಷ್ಟ್ರೀಯ ಕಲಾವಿದ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇದರ ಸದಸ್ಯ ಮಹೇಬೂಬ ಕಿಲ್ಲೇದಾರ ಅವರು ಮಾತನಾಡಿ, ಜಾನಪದ ಕಲೆ ಮತ್ತು ಸಂಸ್ಕೃತಿ ನಮ್ಮ ನಾಡಿನ ಅಮೂಲ್ಯ ಪರಂಪರೆಯಾಗಿವೆ. ಜನಪದವು ಜನಜೀವನದ ಅನುಭವ, ಸಂಪ್ರದಾಯ, ಆಚಾರ-ವಿಚಾರ ಹಾಗೂ ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.  ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ವಿಕಾಸ ಉಳ್ಳಾಗಡ್ಡಿ, ವಿರುಪಾಕ್ಷಯ್ಯ ಗಂಧದ, ಕಳಕಪ್ಪ ಸಿದ್ದಪ್ಪ ಕುರಿ, ಬಸವರಾಜ ಈಳಗೇರ, ರೆಹಮಾನಸಾಬ್ ನಾಯಕ, ಬಸವರಾಜ ಒಂಟೆಲಿ, ಜಯಶ್ರೀ ಮಲ್ಲಪ್ಪ ಕಂದಕೂರ, ಲಕ್ಷ್ಮೀಬಾಯಿ, ಶ್ರೀ ಮಹಾಂತೇಶ ಛಲವಾದಿ ಸೇರಿದಂತೆ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ