ಯಲಬುರ್ಗಾದಲ್ಲಿ ಶ್ರೀ ಬಸವಲಿಂಗ ಶಿವಾಚಾರ್ಯರ 40ನೇ ಪುಣ್ಯಾರಾಧನೆ ಸಂಭ್ರಮದಿಂದ ಆಚರಣೆ
ಯಲಬುರ್ಗಾ 13: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಲಿಂಗೈಕ್ಯ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 40ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ಅಂಗವಾಗಿ ಲಿಂಗೈಕ್ಯ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಸಂಚರಿಸಿತು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಕಳಸ ಹಾಗೂ ಕನ್ನಡಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಭಕ್ತರು ಹಾಗೂ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿ ಲಿಂಗೈಕ್ಯ ಶ್ರೀಗಳ ಸೇವೆ, ತ್ಯಾಗ ಹಾಗೂ ಆದರ್ಶಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಶ್ರೀ ಷ.ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬೇನಾಳದ ಗುಳೇದಗುಡ್ಡ ಶ್ರೀ ಅಭಿನವ ಒಪ್ಪತೇಶ್ವರ ಸ್ವಾಮೀಜಿಗಳು, ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಜಿಗೇರಿಯ ಹಿರೇಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳು ಹಾಗೂ ರಾಜೂರು ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೂಜ್ಯರು ಪಾಲ್ಗೊಂಡಿದ್ದರು.