ಬಳ್ಳಾರಿ

ನ್ಯಾಯಾಧೀಶ ಮೋಹನ್ ಹೆಚ್‌.ಎ ಅಭಿಮತ ; ಆರಂಭಿಕ ಚಿಕಿತ್ಸೆಯಿಂದ ಕಾಯಿಲೆ ಗುಣಮುಖ ಸಾಧ್ಯ

ನ್ಯಾಯಾಧೀಶ ಮೋಹನ್ ಹೆಚ್‌.ಎ ಅಭಿಮತ  ; ಆರಂಭಿಕ ಚಿಕಿತ್ಸೆಯಿಂದ ಕಾಯಿಲೆ ಗುಣಮುಖ ಸಾಧ್ಯ

ಬಳ್ಳಾರಿ 13: ವ್ಯಕ್ತಿಯಲ್ಲಿ ಪದೇ ಪದೇ ಎದುರಾಗುವ ತೀವ್ರ ಸಂಕಷ್ಟಗಳು, ಅತಿಯಾದ ಮಾನಸಿಕ ಒತ್ತಡ ಹಾಗೂ ಮಿತಿಮೀರಿದ ಆಲೋಚನೆಗಳಿಂದ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿಯೇ ರೋಗಿಯ ಮನಃಸ್ಥಿತಿಯನ್ನು ಅರ್ಥೈಸಿಕೊಂಡು, ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯೊಂದಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಕಾಯಿಲೆಯನ್ನು ಬೇಗನೆ ಗುಣಪಡಿಸಬಹುದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷರಾದ ಮೋಹನ್ ಹೆಚ್‌.ಎ ಅವರು ಹೇಳಿದರು. ನಗರದ ಬಿ.ಐ.ಟಿ.ಎಂ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷದ ಯುವಜನತೆಯಲ್ಲಿ ಗ್ರಾಮೀಣ-ನಗರ ಅಥವಾ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಉಚಿತ ಆಪ್ತ ಸಮಾಲೋಚನೆ ಮತ್ತು ಓಷಧೋಪಚಾರಗಳು ಲಭ್ಯವಿವೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಟೆಲಿ-ಮನಸ್ ಉಚಿತ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ತಿಳಿಸಿದರು. 

ಮನೋರೋಗ ತಜ್ಞ ಡಾ. ನಂದಕಿಶೋರ್ ಎನ್‌.ಬಿ ಅವರು ಮಾತನಾಡಿ, ಮಾನಸಿಕ ಸಮಸ್ಯೆಯು ವ್ಯಕ್ತಿಯ ಆಲೋಚನೆ, ಭಾವನೆ ಹಾಗೂ ಗ್ರಹಿಕೆಯನ್ನು ಬಾಧಿಸುತ್ತದೆ. ಕಾರಣವಿಲ್ಲದೆ ಅತಿಯಾದ ಕೋಪ, ದುಃಖ, ಅತಿಯಾದ ನಗು ಅಥವಾ ಅಳು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಲಕ್ಷಣಗಳು ಕಂಡ ಕೆಲವೇ ವಾರಗಳಲ್ಲಿ ಮಾತ್ರೆ ಅಥವಾ ಚುಚ್ಚುಮದ್ದಿನ ಚಿಕಿತ್ಸೆ ಆರಂಭಿಸಿದರೆ ಕಾಯಿಲೆಯನ್ನು ಶೀಘ್ರವೇ ನಿಯಂತ್ರಿಸಬಹುದು. ಪ್ರಸ್ತುತ ‘ಮನೋಚೈತನ್ಯ' ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಐ.ಟಿ.ಎಂ ಕಾಲೇಜಿನ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಡಿ. ಮಳಗಿ, ಬಿ.ಐ.ಟಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಭಾಗವಹಿಸಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್‌. ಕರ್ಜಿಗಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಶಾಂತಕುಮಾರ್ ಹೆಚ್‌., ಶರ್ಮಾಸ್ ವಲಿ, ರಂಜಿತಾ ಜಿ., ಸಾಹೇರಾ ಬಾನು, ನಿರಂಜನ, ವೀರಭದ್ರ​‍್ಪ, ರಮೇಶ್ ಬಾಬು ಸೇರಿದಂತೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ