ರಾಷ್ಟ್ರೀಯ

ರಫೇಲ್ ವಿವಾದದ 2018ರ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ರಫೇಲ್ ವಿವಾದದ 2018ರ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ, ಅಕ್ಟೋಬರ್ 13 (ಯುಎನ್‌ಐ): ಪ್ರಧಾನಿ ನರೇಂದ್ರ ಮೋದಿ ಮತ್ತು ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು 2018ರಲ್ಲಿ ನೀಡಿದ್ದರೆನ್ನಲಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

“ನೋಟಿಸ್ ಜಾರಿಗೊಳಿಸಿ. ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಪಟ್ಟಿ ಮಾಡಿ. ವಿಚಾರಣೆಗೆ ತಡೆ ನೀಡಲಾಗಿದೆ,” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

2018ರಲ್ಲಿ ರಫೇಲ್ ಯುದ್ಧವಿಮಾನ ಒಪ್ಪಂದದ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು “ಕಮಾಂಡರ್-ಇನ್-ಥೀಫ್” ಮತ್ತು “ಚೋರೋಂ ಕೇ ಸರ್ದಾರ್” ಎಂಬ ಪದಗಳನ್ನು ಬಳಸಿದ್ದರೆನ್ನಲಾಗಿದೆ. ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಬಿಜೆಪಿ ಸದಸ್ಯ ಮಹೇಶ್ ಶ್ರೀಶ್ರೀಮಲ್ ಅವರು ಮುಂಬೈನ ಗಿರ್ಗಾಂವ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿಯವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ದೂರಿನ ಪ್ರಕಾರ, ಈ ಹೇಳಿಕೆಗಳು ಬಳಿಕ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡು ಚರ್ಚೆಗೆ ಗ್ರಾಸವಾಗಿದ್ದವು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2019ರ ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. 2021ರ ಜುಲೈನಲ್ಲಿ ಸಮನ್ಸ್ ಸ್ವೀಕರಿಸಿದ ಬಳಿಕ, ಅವರು ಸಮನ್ಸ್ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಮಾನನಷ್ಟ ಮೊಕದ್ದಮೆಯ ವಿಚಾರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಸುದ್ದಿ ಓದಿ