ದಸರಾ ರಜೆಯಲ್ಲಿ ಬಡವರ ಮಕ್ಕಳು ಹತ್ತಿ ಬಿಡಿಸುವ ಕೆಲಸದಲ್ಲಿ ತೊಡಗಿರುವದು
ಲಕ್ಷ್ಮೇಶ್ವರ 13: "ದಸರಾ ಹಬ್ಬ ಎಂದರೆ ಸಾಂಸ್ಕೃತಿಕ ಸೌಂದರ್ಯ, ಸಂಭ್ರಮ ಮತ್ತು ರಜೆಗಳ ದಿನಗಳು. ಶಾಲಾ ಮಕ್ಕಳಿಗೆ ಈ ರಜೆಯು ಆಟ ಆಡಲು, ಪ್ರವಾಸ ಹೋಗಲು ಮತ್ತು ಮೋಜು ಮಾಡಲು ಸಿಗುವ ಸುವರ್ಣಾವಕಾಶ. ಆದರೆ, ಸಮಾಜದ ಇನ್ನೊಂದು ಮುಖದಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಮಕ್ಕಳಿಗೆ ಈ ದಸರಾ ರಜೆಯು ಆಟದ ದಿನಗಳಲ್ಲ, ಬದಲಿಗೆ ದುಡಿಮೆಯ ದಿನಗಳಾಗಿರುತ್ತವೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ದಸರಾ ರಜೆಯ ಅವಧಿಯಲ್ಲಿ ಬಡವರ ಮಕ್ಕಳು ಹತ್ತಿ ಹೊಲಗಳಿಗೆ ಹೋಗಿ ಹತ್ತಿ ಬಿಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ನಾವು ಕಾಣಬಹುದು.
ರಜೆಯ ದಿನಗಳಲ್ಲಿ ದುಡಿಮೆಯ ಅನಿವಾರ್ಯತೆಶ್ರೀಮಂತ ಅಥವಾ ಮಧ್ಯಮ ವರ್ಗದ ಮಕ್ಕಳು ರಜೆಯನ್ನು ಸವಿಯಲು ಸಿದ್ಧತೆ ನಡೆಸಿದರೆ, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ರಜೆಯು ಹೊಟ್ಟೆಯ ಪಾಡಿಗೆ ದಾರಿಯಾಗುತ್ತದೆ. ಅಕ್ಟೋಬರ್ ತಿಂಗಳು ಹತ್ತಿ ಫಸಲು ಕೈಗೆ ಬರುವ ಸಮಯ. ಈ ಸಮಯದಲ್ಲಿ ಕೂಲಿ ಆಳುಗಳ ಕೊರತೆ ಇರುತ್ತದೆ ಮತ್ತು ಕೂಲಿ ದರವೂ ಹೆಚ್ಚಿರುತ್ತದೆ. ಬಡ ಹೆತ್ತವರು ತಮ್ಮ ಮಕ್ಕಳನ್ನು ತಮ್ಮೊಂದಿಗೆ ಹತ್ತಿ ಬಿಡಿಸಲು ಕರೆದುಕೊಂಡು ಹೋಗುತ್ತಾರೆ. ಇದರಿಂದ ಕುಟುಂಬಕ್ಕೆ ಒಂದಿಷ್ಟು ಹೆಚ್ಚುವರಿ ಆದಾಯ ಸಿಗುತ್ತದೆ ಹಾಗೂ ಶಾಲಾ ಶುಲ್ಕ ಅಥವಾ ಹಬ್ಬದ ಖರ್ಚಿಗೆ ನೆರವಾಗುತ್ತದೆ ಎಂಬುದು ಪೋಷಕರ ಆಶಯವಾಗಿರುತ್ತದೆ.ಅದರಂತೆ ತಾಲೂಕಿನ ಗೊಜನೂರು ಗ್ರಾಮದ ರೈತ ಚನ್ನಪ್ಪ ಷಣ್ಮುಖಿ ಅವರು ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಯನ್ನು ಬಿಡಿಸಲು ಬರುವ ಗ್ರಾಮದ ಬಡವರು ರಜೆ ದಿನದಲ್ಲಿರುವ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಹತ್ತಿ ಬಿಡಿಸುವ ಕೆಲಸದಲ್ಲಿ ತೊಡಗಿರುವುದು ಕಂಡು ಬರುತ್ತಿದೆ