ಬಾವಿಗೆ ಬಿದ್ದ ನಾಯಿ; ಸಮಯಕ್ಕೆ ಧಾವಿಸಿದ ಅಗ್ನಿಶಾಮಕ ದಳ!
ಬಾವಿಗೆ ಬಿದ್ದ ನಾಯಿ; ಸಮಯಕ್ಕೆ ಧಾವಿಸಿದ ಅಗ್ನಿಶಾಮಕ ದಳ!
ಲೋಕದರ್ಶನ ವರದಿ
ಯಲಬುರ್ಗಾ 12: ಆಯತಪ್ಪಿ ಪಾಳುಬಿದ್ದ ಬಾವಿಗೆ ಬಿದ್ದಿದ್ದ ಸಾಕು ನಾಯಿಯನ್ನು ಯಲಬುರ್ಗಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಜೀವಂತವಾಗಿ ಹೊರತೆಗೆದ ಘಟನೆ ತಾಲೂಕಿನ ಕರಮುಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಕರಮುಡಿ ಗ್ರಾಮದ ಪಾಳುಬಿದ್ದ ಬಾವಿಯಲ್ಲಿ ಸಾಕು ನಾಯಿ ಬಿದ್ದಿರುವ ಕುರಿತು ಸಿದ್ದಪ್ಪ ಗೊಗೇರಿ ಅವರು ಯಲಬುರ್ಗಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಾವಿಯೊಳಗೆ ಸಿಲುಕಿದ್ದ ನಾಯಿಯನ್ನು ರಕ್ಷಣಾ ಉಪಕರಣಗಳ ನೆರವಿನಿಂದ ಹೊರತೆಗೆಯಲು ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ನಾಯಿಯನ್ನು ಯಾವುದೇ ಅಪಾಯವಾಗದಂತೆ ಜೀವಂತವಾಗಿ ಹೊರತೆಗೆದು ಅದರ ಮಾಲೀಕರಿಗೆ ಹಸ್ತಾಂತರಿಸಿದರು. ಯಲಬುರ್ಗಾ ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿ ಕೆ. ಚಕ್ರಸಾಳಿ (ಂಈಖಓ) ಅವರ ನೇತೃತ್ವದಲ್ಲಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪಾಳುಬಿದ್ದ ಬಾವಿಗೆ ಆಯತಪ್ಪಿ ಬಿದ್ದಿದ್ದ ಮೂಕಪ್ರಾಣಿಯ ಜೀವ ಉಳಿಸಲು ತಕ್ಷಣ ಸ್ಪಂದಿಸಿ ಯಶಸ್ವಿಯಾಗಿ ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಕರಮುಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.